ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ 11ನೇ ಇನಿದನಿ ಕಾರ್ಯಕ್ರಮ ಜನವರಿ 15ರ ಭಾನುವಾರ ಸಂಜೆ 6 ಗಂಟೆಗೆ ಇಲ್ಲಿನ ಬೋರ್ಡ್ ಹೈಸ್ಕೂಲಿನಲ್ಲಿ ಜರುಗಲಿದೆ. ಪ್ರಸಿದ್ಧ ಹಾಗೂ ಯುವ ಪ್ರತಿಭಾನ್ವಿತ ಕಲಾವಿದರು ಸೇರಿದಂತೆ ಒಟ್ಟು 27 ಮಂದಿ ಕಲಾವಿದರ ಇನಿದನಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಹೇಳಿದರು.
ಅವರು ಕಲಾಕ್ಷೇತ್ರ ಕುಂದಾಪುರ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಿವಮೊಗ್ಗದ ವೇಣುಗೋಪಾಲ, ಬೆಂಗಳೂರಿನ ರಮೇಶ್ಚಂದ್ರ ಮತ್ತು ಶೃತಿ ಭಿಡೆ, ಸಂಗೀತ ಬಾಲಚಂದ್ರ ಉಡುಪಿ, ರವೀಂದ್ರ ಪ್ರಭು ಮೂಲ್ಕಿ, ವೈ ಎನ್. ರವೀಂದ್ರ ಮಂಗಳೂರು, ಅಶೋಕ್ ಸಾರಂಗ್ ಕುಂದಾಪುರ ಹಾಗೂ ಯುವ ಪ್ರತಿಭೆ ಪ್ರಾಪ್ತಿ ಹೆಗ್ಡೆ, ಧಾರಿಣಿ ಕುಂದಾಪುರ ಮತ್ತು ಕಮಲ್ ಕುಂದಾಪುರ ಗಾಯಕ ಗಾಯಕಿಯರು ಭಾಗವಹಿಸಲಿದ್ದು, ಗಿಟಾರ್ ಮಾಂತ್ರಿಕ ಮಂಗಳೂರಿನ ರಾಜಗೋಪಾಲ್ ಮತ್ತು ಕೀಬೋರ್ಡ್ ಮಾಂತ್ರಿಕ ದೀಪಕ್ ಶಿವಮೊಗ್ಗ ಮತ್ತು ಇತರೇ ಪರಿಪಕ್ವ ಕಲಾವಿದರುಗಳನ್ನೊಳಗೊಂಡ ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರೊಂದಿಗೆ ಪಳಗಿದ 5 ಮಂದಿ ವೈಯಲಿನ್ ವಾದಕರು ಇನಿದನಿಗೆ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು 29 ಗೀತೆಗಳನ್ನು ಹಾಡಲಾಗುತ್ತಿದೆ. ಗೀತೆಗಳ ಆಯ್ಕೆಯನ್ನು ಕಲಾಕ್ಷೇತ್ರವೇ ಮಾಡಿದ್ದು, ಒಂದು ದಿನದ ಮೊದಲೇ ಹಾಡಿಗೆ ಸಿದ್ಧತೆ ನಡೆಸಲಾಗುತ್ತದೆ ಎಂದರು.
ಇನಿದನಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ ಹಾಗೂ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ರಮೇಶ್ ಭಟ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ನಮ್ಮೂರಿನ ಹೆಮ್ಮೆಯ ಸಾಹಿತಿ, ಸಾಧಕ, ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಅವರನ್ನು, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಬಸ್ರೂರು ಅವರಿಂದ ಸನ್ಮಾನಿಸಲಾಗುವುದು ಎಂದರು.
ಭಜನ್ ಸಂಧ್ಯಾ:
ಇನಿದನಿಯ ಮುನ್ನಾದಿನ ಜನವರಿ ೧೪ ರಂದು ಪ್ರಕಾಶ ಯಡಿಯಾಳ್ ಮತ್ತು ಅವಿನಾಶ್ ಹೆಬ್ಬಾರ್ ಸಂಸ್ಮರಣೆ ಹಮ್ಮಿಕೊಳ್ಳಲಾಗಿದ್ದು, ಅವರ ಸ್ಮರಣಾರ್ಥ ನಡೆಯುವ ಸಂಗೀತ ಸಂದ್ಯಾ ಕಾರ್ಯಕ್ರಮದಲ್ಲಿ ಪಂಡಿತ್ ರವಿಕಿರಣ್ ಮಣಿಪಾಲ ಇವರ ಭಕ್ತಿ ಗಾನಾಮೃತ ಗಾಯನ ಕಾರ್ಯಕ್ರಮವಿದ್ದು, ಬಾರವಿ ದೇರಾಜೆ ತಬಲಾದಲ್ಲಿ, ಭರತ್ ಹೆಗಡೆ ಹೆಬ್ಬಲಸು ಹಾರ್ಮೋನಿಯಂನಲ್ಲಿ, ರಂಗ ಪೈ ಮಣಿಪಾಲ್ ಪಿಟೀಲು ವಾದನದಲ್ಲಿ ಮತ್ತು ಡಾ. ದಾಮೋದರ ಹೆಗ್ಡೆಯವರ ಸಹ ಗಾಯಕರಾಗಿ ಸಾಥ್‌ನೀಡಲಿದ್ದಾರೆ. ಇನಿದನಿ ಹಾಗೂ ಸಂಗೀತ ಸಂದ್ಯಾ ಎರಡೂ ಕಾರ್ಯಕ್ರಮವನ್ನು ಮೂಡುಬಿದಿರೆಯ ಕೆ. ವಿ. ರಮಣ್‌ರವರು ನಿರ್ವಹಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ನಾಯಕ್, ದಾಮೋದರ ಪೈ, ರಾಜೇಶ್ ಕಾವೇರಿ, ಜಾಯ್ ಕರ್ವೆಲ್ಲೊ, ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು.