ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ಬಸ್ಸಿನಿಂದ ಕೆಳಗೆ ಇಳಿಯುವ ಸಂದರ್ಭ ಆಯತಪ್ಪಿ ಬಸ್ ಚಕ್ರದಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಹೆಮ್ಮಾಡಿಯ ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ. ಕಟ್‌ಬೇಲ್ತೂರು ನಿವಾಸಿ, ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಸುದೀಪ್ (20) ಮೃತ ದುರ್ದೈವಿ.
ಸಾಗರದಿಂದ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ಸಿಗೆ ಕಟ್‌ಬೆಲ್ತೂರು ನಿಲ್ದಾಣದಲ್ಲಿ ಹತ್ತಿದ್ದ ಸುದೀಪ್, ಬಸ್ ರಶ್ ಇರುವ ಕಾರಣ ಪುಟ್‌ಬೋರ್ಡ್ ಮೇಲೆಯೇ ನಿಂತು ಪ್ರಯಾಣಿಸಿದ್ದ. ಮುಂದೆ ಹೆಮ್ಮಾಡಿ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಯಬೇಕಿದ್ದರಿಂದ, ಬಸ್ ನಿಲ್ಲಿಸುವ ವೇಳೆ ಪುಟ್‌ಬೋರ್ಡ್ ಮೇಲೆ ನಿಂತಿದ್ದ ಸುದೀಪ್ ಕೂಡ ಇಳಿಯಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್ ಮುಂಬದಿಯ ಬಾಗಿಲಲ್ಲಿ ನಿಂತಿದ್ದ ಆತ ಬಸ್ಸಿನ ಮುಂಬದಿಯ ಚಕ್ರದಡಿಯಲ್ಲಿ ಸಿಲುಕಿಕೊಂಡಿದ್ದ. ಚಾಲಕ ವಿದ್ಯಾರ್ಥಿಯನ್ನು ಉಳಿಸುವ ಪ್ರಯತ್ನ ನಡೆಸಿದರಾದರೂ ಸೊಂಟದ ಮೇಲೆ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡ ಸುದೀಪ್ ಕೊನೆಯುಸಿರೆಳೆದಿದ್ದಾನೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ ಕಾಲೇಜು ಅವಧಿಯಲ್ಲಿ ಬಸ್ ರಶ್ ಇರುವ ಕಾರಣ, ವಿದ್ಯಾರ್ಥಿಗಳಿಗೆ ಪೂಟ್‌ಬೋರ್ಡ್ ಮೇಲೆಯೇ ನಿಂತು ಪ್ರಯಾಣಸುವ ಅನಿವಾರ್ಯತೆ ಎದುರಾಗಿದ್ದು, ಇದು ಅಪಾಯಕ್ಕೂ ದಾರಿ ಮಾಡಿಕೊಡುತ್ತಿದೆ. ಶಾಲಾ ಅವಧಿಯಲ್ಲಿ ಹೆಚ್ಚಿನ ಬಸ್ ಒದಗಿಸುವಂತೆ ಆಗ್ರಹವಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.