ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ :ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕೋ. ಶಿವಾನಂದ ಕಾರಂತರನ್ನು ಆಯ್ಕೆ ಮಾಡಲಾಗಿದೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಉಮೇಶ್ ಪುತ್ರನ್ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಕೋಶಾಧ್ಯಕ್ಷ ಮನೋಹರ ಪಿ., ತಾಲೂಕು ಪದಾಧಿಕಾರಿಗಳಾದ ದಿನಕರ ಶೆಟ್ಟಿ, ಕೆ. ಎಸ್. ಮಂಜುನಾಥ್, ಅಕ್ಷತಾ ಗಿರೀಶ್ ಐತಾಳ ಅವರು ಭಾಗವಹಿಸಿದ ಸಭೆಯಲ್ಲಿ
ಕೋ. ಶಿವಾನಂದ ಕಾರಂತರನ್ನು ಆಯ್ಕೆ ಮಾಡಲಾಯಿತು ಹಾಗೂ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಠಾರದಲ್ಲಿ ಸಮ್ಮೇಳನ ಏರ್ಪಡಿಸಲು ನಿರ್ಧರಿಸಲಾಯಿತು.
ಕೋ. ಶಿವಾನಂದ ಕಾರಂತರು ನಿವೃತ್ತ ಉಪನ್ಯಾಸಕರಾಗಿದ್ದು, ಗಂಗೊಳ್ಳಿ ಸ.ವಿ. ಶಿಕ್ಷಣ ಸಂಸ್ಥೆಯಲ್ಲಿ ನಾಲ್ಕು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ರಂಗ ನಿರ್ದೇಶಕರಾಗಿ ನೂರಾರು ನಾಟಕಗಳನ್ನು ನೀಡಿರುವ ಅವರು ನಟರಾಗಿಯೂ ಖ್ಯಾತರಾದವರು. ಆಕಾಶವಾಣಿಯ ಚಿಂತನ ವಿಭಾಗದ ಸಂಪನ್ಮೂಲ ವ್ಯಕ್ತಿ. ಸಾಹಿತಿಯಾಗಿ ಕಥೆ, ಕವನ, ಅಂಕಣ ಬರಹಗಳನ್ನು ಬರೆದವರು. ಅವರ ಕಥಾ ಸಂಗ್ರಹಗಳು ಪ್ರಕಟವಾಗಿವೆ. ಅಂಕಣ ಬರಹಗಳು ಐದು ಸಂಪುಟಗಳಲ್ಲಿ ಪ್ರಕಟವಾಗಿವೆ. ಕುಂದಪ್ರಭ ವಾರ ಪತ್ರಿಕೆಯಲ್ಲಿ ಮೂರು ದಶಕಗಳಿಂದ ನಿರಂತರವಾಗಿ ಅಂಕಣ ಬರೆಯುತ್ತಿದ್ದಾರೆ. ಚಿಂತಕ ಹಾಗೂ ಅಸ್ಖಲಿತ ವಾಗ್ಮಿ.
ಕುಂದಾಪುರದ ಹಿಂದೂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ, ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಹಾಗೂ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದವರು.