ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರಿ. ಬೈಂದೂರು ತಾಲೂಕು ಬೈಂದೂರು ವಲಯ ನೇತೃತ್ವದಲ್ಲಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ ಬೈಂದೂರು ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೈಂದೂರು ವಲಯದ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಇಲ್ಲಿನ ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ಜರುಗಿತು.
ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತಾಲೂಕಿನಲ್ಲಿ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ದೊಡ್ಡದಾಗಿದೆ. ಯೋಜನೆಯಿಂದಾಗಿ ಜನರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ ಅವರು ಧಾರ್ಮಿಕ ಪ್ರವಚನ ನೀಡಿದರು. ಉಡುಪಿ ಪ್ರಾದೇಶಿಕ ವಿಭಾಗದ ಆಡಳಿತ ಯೋಜನಾಧಿಕಾರಿ ಪುರಂದರ ಪೂಜಾರಿಯವರು ಒಕ್ಕೂಟದ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿಗಳ ಕುರಿತು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಕೆ. ವಿನಾಯಕ ಪೈ, ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿ, ನಿವೃತ್ತ ಸೈನಿಕರಾದ ಚಂದ್ರಶೇಖರ ನಾವುಡ ಕಾರ್ಯಕ್ರಮದ ಕುರಿತು ಮಾತನಾಡಿದರು.
ಕೇಂದ್ರ ಸಮಿತಿ ಅಧ್ಯಕ್ಷರಾದ ರಘುರಾಮ್ ಪೂಜಾರಿ, ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಕೃಷ್ಣ ಪೂಜಾರಿ, ಜನಜಾಗೃತಿ ವಲಯ ಸದಸ್ಯರಾದ ರಾಮ ಮೇಸ್ತ, ವಾಸು ಮೇಸ್ತ, ಭಜನಾ ಪರಿಷತ್ ಉಪಾಧ್ಯಕ್ಷರಾದ ಮಂಜು ಪೂಜಾರಿ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಬೇಬಿ ಉಪಸ್ಥಿತರಿದ್ದರು.
11 ನಿಕಟ ಪೂರ್ವ ಒಕ್ಕೂಟದ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿದರು. 125 ಜೋಡಿಗಳು ವೃತದಾರಿಗಳಾಗಿ ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಸುಮಾರು 1000 ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದರು.