ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲಾ ಪ್ರೌಡಿಮೆಯ ಜೊತೆಗೆ ಸಮಾಜದಲ್ಲಿ ಹೆಮ್ಮೆಯಿಂದ ಬದುಕಲು ಸಾಧ್ಯವಾಗಿಸುವುದೇ ಕಲಾಸಂಸ್ಥೆಯ ಗುರಿಯಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಬೈಂದೂರು ಶ್ರೀ ರಾಮ ವಿವಿದೋದ್ದೇಶ ಟ್ರಸ್ಟ್ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರೆಗಾರ್
ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಜರುಗುತ್ತಿರುವ ರಂಗಸುರಭಿ 2023 – ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಎರಡನೇ ದಿನ ಸಾಧಕರಿಗೆ ಸನ್ಮಾನಿಸಿ ಮಾತನಾಡಿ 23 ವರ್ಷಗಳ ಪ್ರಯಾಣದಲ್ಲಿ ಸುರಭಿ ಸಂಸ್ಥೆ ಸಾಕಷ್ಟು ಯಶಸ್ಸಿನ ಮೈಲುಗಲ್ಲುಗಳನ್ನು ದಾಖಲಿಸಿ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು.
ತಾ.ಪಂ ಮಾಜಿ ಸದಸ್ಯ ಸದಾಶಿವ ಡಿ. ಪಡುವರಿ, ಉಪ್ಪುಂದ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ. ಮೋಹನ ಪೂಜಾರಿ, ವತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನದ ಅಧ್ಯಕ್ಷರಾದ ನಾಗರಾಜ ಶೆಟ್ಟಿ ನಾಕಟ್ಟೆ, ಉದ್ಯಮಿ ನಾಗರಾಜ ಗಾಣಿಗ ಬಂಕೇಶ್ವರ, ಸ.ಮಾ.ಹಿ.ಪ್ರಾ ಶಾಲೆಯ ಪದವೀಧರ ಮುಖ್ಯೋಪಾಧ್ಯಾಯರಾದ ಜನಾರ್ದನ, ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.
ಹಿರಿಯ ರಂಗನಟ ಗಣೇಶ್ ಕಾರಂತ್ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಸುಧಾಕರ ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷರಾದ ನಾಗರಾಜ ಪಿ. ಯಡ್ತರೆ ಸ್ವಾಗತಿಸಿದರು. ಸದಸ್ಯರಾದ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸುರಭಿ ಕಲಾವಿದರ ಪ್ರಸ್ತುತಿಯಲ್ಲಿ, ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ, ಗಣೇಶ್ ಮಂದರ್ತಿ ನಿರ್ದೇಶನದ ‘ಚೋಮನದುಡಿ’ ನಾಟಕ ಪ್ರದರ್ಶನಗೊಂಡಿತು.