ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೊಡಮಾಡುವ ಜನಸ್ನೇಹಿ ಐಎಎಸ್ ಅಧಿಕಾರಿ ದಿ. ಶ್ರೀಮತಿ ಅನಿತಾಕೌಲ್ ನೆನಪಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕೋಟ ವಿವೇಕ ಬಾಲಕಿಯರ ಫ್ರೌಡಶಾಲೆಯ ಶಿಕ್ಷಕ, ಸಾಹಿತಿ ಶ್ರೀ ನರೇಂದ್ರ ಕುಮಾರ್ ಕೋಟ ಅವರನ್ನು ಆಯ್ಕೆ ಮಾಡಲಾಗಿದೆ.
ಸದಾ ಹೊಸತನದ ತುಡಿತ, ಮುಖದಲ್ಲಿ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಮಕ್ಕಳಿಗೆ ಗುರುವಾಗಿ, ಹಲವಾರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಆಪ್ತರಲ್ಲಿ ಒಬ್ಬರಾಗಿ, ಪಾದರಸದಂತೆ ದಿನ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ ಮಾತುಗಳನ್ನಾಡಿ, ಸ್ಥಳೀಯ ಸಂಘ ಸಂಸ್ಥೆಗಳಿಗೆ ದಾರಿ ದೀಪವಾಗಿ ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿರುವ ಸಾಹಿತಿ-ಶಿಕ್ಷಕ ಶ್ರೀನರೇಂದ್ರ ಕುಮಾರ್ ಕೋಟ ಅವರು ೨೦೨೦-೨೧ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಅಲ್ಲದೇ ಭಾರತ ಸರಕಾರದ ದ.ಕ ಜಿಲ್ಲಾ ಯುವ ಪುಸ್ಕಾರ-೧೯೯೩, ರಾಜ್ಯ ಮಟ್ಟದ ಕಾವ್ಯ ಶ್ರೀ ಪುರಸ್ಕಾರ(ಸಾಹಿತ್ಯ ಸಾಧನೆಗಳು)-೨೦೦೨, ದಿವಂಗತ ರಾಜೇಂದ್ರ ಶೆಟ್ಟಿ ಸ್ಮಾರಕ(ಹೊಸ ತರಬೇತಿಯ ಆವಿಷ್ಕಾರಕ್ಕೆ)-೨೦೦೩, ರಾಷ್ಟ್ರಮಟ್ಟದ ರವಿರೊಹೇಡ್ಕರ್ ಪುರಸ್ಕಾರ(ವಿವಿಧ ಕ್ಷೇತ್ರದಲ್ಲಿ ದಾಖಲೆ ೧೦೦೦ ತರಬೇತಿಗಳು)-೨೦೧೦,ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ-೨೦೧೦, ರಾಜ್ಯ ಮಟ್ಟದ ಕಾರಂತ ಸದ್ಭಾವನ ಪುರಸ್ಕಾರ-೨೦೧೦, ರಾಷ್ಟ್ರಮಟ್ಟದ ಆರ್ಯಭಟ ಪುರಸ್ಕಾರ-೨೦೧೧, ರಾಷ್ಟ್ರಮಟ್ಟದ ರವೀಂದ್ರ ನಾಥ್ ಟ್ಯಾಗೋರ್ ರಾಷ್ಟ್ರೀಯ ಪುಸ್ಕಾರ-೨೦೧೧, ಸಾಧಕ ಶಿಕ್ಷಕ ಪ್ರಶಸ್ತಿ-೨೦೧೪-೧೫ ಇವರಿಗೆ ಲಭಿಸಿದೆ. ಇದಲ್ಲದೆ ೧೯೯೯-೨೦೦೦ರಲ್ಲಿ ತಾಲೂಕು ಮಟ್ಟದ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನಡೆಸಿದ ಗಾಯನ ಸ್ಪರ್ಧೆಯಲ್ಲಿ ತೃತೀಯ, ೨೦೦೦ರಲ್ಲಿ ಉಡುಪಿ ಜಿಲ್ಲಾ ಮೊದಲನೇ ಶಿಕ್ಷಕ ಸಾಹಿತ್ಯ ಸಮ್ಮೇಳನ ಆಶುಕವಿತಾ ರಚನೆ ದ್ವಿತೀಯ ಆಶುಭಾಷಣದಲ್ಲೂ ದ್ವಿತೀಯ, ೨೦೦೦-೦೧ ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನಡೆಸಿದ ಜಿಲ್ಲಾ ಮಟ್ಟದ ಆಶುಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದರ ಜೊತೆ ಹಲವಾರು ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಇವರ ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ೨೮ ಪುಸ್ತಕಗಳು ಹೊರಹೊಮ್ಮಿದ್ದು ಇನ್ನೂ ೧೪ ಪುಸ್ತಕಗಳು ಪ್ರಕಟಣೆಯ ಅಂತಿಮ ಹಂತದಲ್ಲಿದೆ. ೨೦೦ ಕ್ಕೂ ಮಿಕ್ಕಿದ ಕವನಗಳು, ೨೩ ಕಥೆಗಳು, ೧೫೦ ಲೇಖನಗಳು, ೧೬ ವಿಶೇಷ ಅಂಕಣ ಪ್ರಕಟಗೊಂಡಿದ್ದು, ದಿನ ಪತ್ರಿಕೆ, ವಾರ ಪತ್ರಿಕೆಯಲ್ಲಿ ಇವರ ಲೇಖನ ಕವನಗಳು ರಾರಾಜಿಸುತ್ತಿರುತ್ತದೆ ಅಲ್ಲದೇ ಕಾರಂತರ ವಿಷಯಾಧರಿತ ಸುಗಂಧಿ ಚಲನಚಿತ್ರ ನಿರ್ಮಾಣ ಮಾಡಿ ಅದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಕಿರುಚಿತ್ರಗಳು ಕೂಡಾ ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರದು.