ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರವು ಶುದ್ಧ ಕನ್ನಡದ ನೆಲ. ಕುಂದಾಪ್ರ ಕನ್ನಡ ಭಾಷೆಯ ಮೇಲೆ ಬೇರೆ ಭಾಷೆಯ ಪ್ರಭಾವವಿಲ್ಲ. ಕರ್ನಾಟಕ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಕನ್ನಡದ ಉಚ್ಛಾರವಿದೆಯಾದರೂ ಕುಂದಾಪ್ರ ಕನ್ನಡದ ಪರಿಶುದ್ಧತೆ, ಜನಪದ ಸಾಹಿತ್ಯದಲ್ಲಿನ ವೈಶಿಷ್ಟ್ಯ, ಸಂಸ್ಕೃತಿ ಬೇರೆಲ್ಲೂ ಇಲ್ಲ. ಸಾವಿರಾರು ವರ್ಷಗಳಿಂದ ತನ್ನತನ ಉಳಿಸಿಕೊಂಡಿರುವ ಈ ಭಾಷೆಯ ವೈಶಿಷ್ಟ್ಯ ಮತ್ತು ಚೆಲುವಿಗೆ ಇನ್ನೊಂದರ ಹೋಲಿಕೆ ಸಾಧ್ಯವಿಲ್ಲ. ಇಂತಹ ಭಾಷೆಗೆ ಪ್ರತ್ಯೇಕ ಅಕಾಡೆಮಿಯ ಅಗತ್ಯವಿದ್ದು, ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಈ ಬಗ್ಗೆ ನೀರಾಸಕ್ತಿ ತೋರಿರುವುದು ಖಂಡನೀಯ ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಕುಂದಾಪುರದ ಖಾಸಗಿ ಹೋಟೆಲಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಐದು ಸಾವಿರಕ್ಕೂ ಹೆಚ್ಚು ಶಬ್ದಗಳನ್ನು ಹೊಂದಿರುವ ಕುಂದಾಪ್ರ ಕನ್ನಡ ಭಾಷೆಯಲ್ಲಿ ನಿಘಂಟು ಪ್ರಕಟವಾಗಿದೆ. ಸಾಹಿತ್ಯ, ಸಂಗೀತ, ಚಲನಚಿತ್ರ ರಂಗಭೂಮಿ ಹಾಗೂ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕುಂದ ಕನ್ನಡ ನಿರಂತರವಾಗಿ ಬಳಕೆಯಾಗುತ್ತಿದೆ.
ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪಿಸುವ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಎತ್ತಲಾದ ಪ್ರಶ್ನೆಗೆ ಸಚಿವರು, ಯಾರೊಂದಿಗೂ ಸಮಾಲೋಚಿಸದೇ, ಅಧ್ಯಯನ ಮಾಡದೇ ಕರ್ನಾಟಕದಲ್ಲಿ ವಿವಿಧ ರೀತಿಯ ಕನ್ನಡ ಮಾತನಾಡುವುದು ಸಾಮಾನ್ಯ ಎಂಬಂತೆ ಉತ್ತರ ನೀಡಿರುವುದು ಬೇಸರ ತರಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಉಡುಪಿ ಜಿಲ್ಲೆಯವರಾಗಿದ್ದು, ಅವರ ವಿಧಾನ ಸಭಾ ಕ್ಷೇತ್ರದ ಬಹಳಷ್ಟು ಗ್ರಾಮಗಳಲ್ಲಿ ಕುಂದಾಪ್ರ ಕನ್ನಡ ಭಾಷೆಯ ಜನರೇ ಇದ್ದರೂ ಈ ರೀತಿಯಲ್ಲಿ ಅಸಡ್ಡೆಯ ಉತ್ತರ ನೀಡಿರುವುದು ಖಂಡನೀಯ. ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕುಂದಾಪ್ರ ಕನ್ನಡ ಪೀಠಕ್ಕೆ ಅನುದಾನ ಮಂಜೂರಾತಿ ಬಗ್ಗೆ ಸರಕಾರ ಹಿಂದೇಟು ಹಾಕಿದರೆ ಹೋರಾಟದ ಹಾದಿ ತುಳಿಯಲಾಗುವುದು ಎಂದರು.
ಹಿರಿಯ ಪತ್ರಕರ್ತ ಯು.ಎಸ್. ಶೆಣೈ ಅವರು ಮಾತನಾಡಿ, ಅಕಾಡೆಮಿ ಹಾಗೂ ಅಧ್ಯಯನ ಪೀಠ ಆರಂಭಿಸುವಂತೆ ಸರಕಾರಕ್ಕೆ ಹಿಂದೆಯೂ ಮನವಿಯನ್ನು ನೀಡಲಾಗಿತ್ತು. ಈ ಬಗ್ಗೆ ವಿವಿಧ ವಿದ್ವಾಂಸರಿಂದ ಮಾಹಿತಿ ಸಂಗ್ರಹಿಸಿ ವಿಧಾನ ಪರಿಷತ್‌ನಲ್ಲಿ ಮಂಜುನಾಥ ಭಂಡಾರಿಯವರು ಪ್ರಸ್ತಾಪ ಮಾಡಿ ಸರಕಾರದಿಂದ ಉತ್ತರ ಬಯಸಿದ್ದರು. ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಅವರು ಈ ಬಗ್ಗೆ ನಿರಾಶಾದಾಯಕ ಉತ್ತರ ನೀಡಿ, ಕುಂದಾಪ್ರ ಕನ್ನಡ ಅಕಾಡೆಮಿಯ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ. ಕನ್ನಡ ಭಾಷಾ ಸಮಗ್ರತೆಯ ದೃಷ್ಠಿಯಿಂದ ಸೂಕ್ತವಲ್ಲ ಎಂಬ ಅಸಮರ್ಪಕ ಹೇಳಿಕೆಯನ್ನು ನೀಡಿರುವುದು ನಮಗೆ ಬೇಸರ ತರಿಸಿದೆ ಎಂದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ಪುತ್ರನ್ ಮಾತನಾಡಿ, 30 ಲಕ್ಷಕ್ಕೂ ಅಧಿಕ ಭಾಷಿಕರಿರುವ, ಶುದ್ಧ ಕನ್ನಡ ಪ್ರಕಾರದ ಬಗ್ಗೆ ಸರಕಾರ ಅಸಡ್ಡೆ ತೋರಿರುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ವರ್ಷಗಳಿಂದ ಕುಂದಾಪ್ರ ಕನ್ನಡ ಅಕಾಡೆಮಿ ಅಥವಾ ಅಧ್ಯಯನ ಪೀಠ ಆರಂಭಿಸುವಂತೆ ಠರಾವು ಮಂಡಿಸುತ್ತಲೇ ಬರಲಾಗುತ್ತಿದೆ. ಭಾಷೆಯ ಅಧ್ಯಯನ, ಉಳಿವು ಹಾಗೂ ರಚನಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ಅಕಾಡೆಮಿ ಅಗತ್ಯವಾಗಿದ್ದು, ಸರಕಾರ ಈ ಮನವಿಯನ್ನು ಹಗುರವಾಗಿ ಪರಿಗಣಿಸಬಾರದು ಎಂದರು.
ಈ ವೇಳೆ ಕುಂದಾಪುರ ದಿನಕರ ಶೆಟ್ಟಿ ಮುಂಬಾರು ಕುಂದಾಪುರ ಪ್ರಾಂತ್ಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ತನ್ನದೇ ಆದ ಅಸ್ತಿತ್ವ ಹೊಂದಿದೆ. ಕುಂದಾಪ್ರ ಕನ್ನಡ ಭಾಷೆಗೆ ವಿಶೇಷವಾದ ಸ್ಥಾನವಿದೆ. ಆದಾಗ್ಯೂ ಅರ್ಹತೆಯಿಂದ ಪಡೆಯಬೇಕಾದ ಸೌಲಭ್ಯದಿಂದ ಈ ಭಾಗ ವಂಚಿತವಾಗುತ್ತಿರುವುದು ಬೇಸರದ ಸಂಗತಿ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಸುಧಾಕರ ಶೆಟ್ಟಿ ಆವರ್ಸೆ, ರತ್ನಾಕರ ಶೆಟ್ಟಿ ಆವರ್ಸೆ, ಗಣಪತಿ ಶ್ರೀಯಾನ್, ವೆಂಕಟೇಶ ಪೈ ಉಪಸ್ಥಿತರಿದ್ದರು.