ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್, ಕುಂದಾಪುರ ಮತ್ತು ಹಿಂದೂ ಅಭ್ಯುದಯ ಸಂಘ(ರಿ.), ನಾವುಂದ ಇವರ ಜಂಟಿ ಆಶ್ರಯದಲ್ಲಿ, ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ, ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ, ಮುದ್ದುಮನೆ-ಶಿರೂರು (ಮಂದಾರ್ತಿ) ಇವರ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರವನ್ನು, ಕುಂದಾಪುರ ರೋಟರಿಯ ಕ್ಲಬ್ ನ ಮಾಜಿ ಅಧ್ಯಕ್ಷರೂ, ಖ್ಯಾತ ವಕೀಲರೂ ಆದ ಶಶಿಧರ ಹೆಗ್ಡೆ ಇವರು ಉದ್ಘಾಟಿಸಿ, ಕಣ್ಣಿನ ರಕ್ಷಣೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು.
ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷರಾದ ವೆಂಕಟೇಶ ನಾವುಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯ ಪ್ರತಿನಿಧಿ ಶಂಕರ ಶೆಟ್ಟಿ ಕುಂದಾಪುರ ಇವರು ಶಿಬಿರದ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದರು. ರಾಘವೆಂದ್ರ ಗೋಪಾಡಿ, ಆಸ್ಪತ್ರೆಯ ವೈದ್ಯರಾದ ಮನೂಜ್ ಭಟ್, ಹಿಂದೂ ಅಭ್ಯುದಯ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ನಾವುಂದ, ಕೋಶಾಧಿಕಾರಿಗಳಾದ ರತ್ನಾಕರ ಕೆ., ಜೊತೆ ಕಾರ್ಯದರ್ಶಿ ವಿಘ್ನೇಶ್ವರ ಕೆ. ಮತ್ತು ಸದಸ್ಯರಾದ ಸಂಜೀವ ಗಾಣಿಗ, ಸತೀಶ್ ಎಸ್. ಪೂಜಾರಿ, ಗುರುರಾಜ ಶೇಟ್, ಮಂಜುನಾಥ ಆರ್. ಗಾಣಿಗ, ಜಿತೇಶ್ ಕೆ. ಪೂಜಾರಿ, ಸುದರ್ಶನ ಗಾಣಿಗ ಹಾಗೂ ಮನೋಹರ ಎನ್.ಕೆ. ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೊರೋನಾ ವಾರಿಯರ್ಸ್ ಆಗಿ ಉತ್ತಮ ಕೆಲಸವನ್ನು ನಿರ್ವಹಿಸಿದ ಆಶಾ ಕಾರ್ಯಕರ್ತೆ ಸಾಕು ಪೂಜಾರಿ, ಕೆಳಗಿನ ಮನೆ, ನಾವುಂದ ಇವರನ್ನು, ಅವರ ಸೇವೆಯನ್ನು ಗುರುತಿಸಿ, ರೋಟರಿ ಕ್ಲಬ್, ಕುಂದಾಪುರದ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು. ಹಿಂದೂ ಅಭ್ಯುದಯ ಸಂಘದ ಅಧ್ಯಕ್ಷರಾದ ಶಶಿಧರ ಎಂ. ಶೆಟ್ಟಿ ಸ್ವಾಗತಿಸಿದರೆ, ಕಾರ್ಯದರ್ಶಿ ಎ. ಶಿವರಾಮ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರೆ, ಕುಂದಾಪುರ ರೋಟರಿಯ ಕಾರ್ಯದರ್ಶಿ ನಾಗರಾಜ ಶೆಟ್ಟಿ ವಂದಿಸಿದರು.
ದಾಖಲೆ ಸಂಖ್ಯೆಯ 275 ಜನರು, ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದು, ಇವರಲ್ಲಿ ಸುಮಾರು 40-50 ಜನರು, ಫೆ. 23 ಮತ್ತು 24 ರಂದು ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿ ಕೊಳ್ಳಲಿರುವರು. ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಕೂಡ ಈ ಶಿಬಿರದಲ್ಲಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಉಚಿತವಾಗಿ ಸಿಹಿ ಮೂತ್ರ ಮತ್ತು ಬಿ.ಪಿ. ತಪಾಸಣೆ ಮಾಡಿದರು. ಕುಂದಾಪುರ ರೋಟರಿಯ ಮಾಜಿ ಅಧ್ಯಕ್ಷರೂ, ಖ್ಯಾತ ಉದ್ಯಮಿಗಳೂ ಆದ ಕೆ. ಆರ್. ನಾಯ್ಕ್ ಅಗತ್ಯವುಳ್ಳ ಸುಮಾರು 50 ಶಿಬಿರಾರ್ಥಿಗಳಿಗೆ ಉಚಿತವಾಗಿ ಕನ್ನಡಕವನ್ನು ನೀಡಿ, ಸಹಕರಿಸಲಿದ್ದಾರೆ.