ಸಾವಿನಲ್ಲೂ ಸಾರ್ಥಕತೆ – 6 ಮಂದಿ ರೋಗಿಗಳಿಗೆ ಬೆಳಕಾದ ಶಿಕ್ಷಕಿ ಶಿಲ್ಪಾ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:
ಮರವಂತೆಯಲ್ಲಿ ಫೆ.25ರಂದು ನಡೆದ ಅಪಘಾತದಿಂದಾಗಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರೀಯವಾಗಿದ್ದ ಉಪ್ಪುಂದ ಮಡಿಕಲ್ ನಿವಾಸಿ, ಶಿಕ್ಷಕಿ ಶಿಲ್ಪಾ ಪ್ರಸನ್ನ ಕುಮಾರ್ (44ವ) ಅವರ ಸಾವಿನ ನೋವಿನ ನಡುವೆಯೂ, ಅವರ ಕುಟುಂಬದ ಸಕಾಲಿಕ ನಿರ್ಧಾರದಿಂದಾಗಿ 6 ಮಂದಿಯ ಜೀವ ಉಳಿಸಲು ಸಾಧ್ಯವಾಗಿದೆ.

Call us

Click Here

ಘಟನೆಯ ವಿವರ:
ಮರವಂತೆ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದ ಶಿಲ್ಪಾ ಅವರು ಶಾಲೆ ಮುಗಿಸಿ ತಮ್ಮ ಸ್ಕೂಟಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾರಿಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆ ಬಳಿಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ರಕ್ಷಿಸಲು ಎಲ್ಲಾ ಪ್ರಯತ್ನದ ನಡುವೆಯೂ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಬಳಿಕ ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ಶಿಲ್ಪಾ ಅವರನ್ನು ಎರಡು ಭಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು.

6 ಮಂದಿಗೆ ಜೀವದಾನ:
ಮೆದುಳು ನಿಷ್ಕ್ರೀಯಗೊಂಡಿರುವುದನ್ನು ವೈದ್ಯರು ಘೋಷಿಸಿದ ಬಳಿಕ ಅವರ ಪತಿ ಪ್ರಸನ್ನ ಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಅದರಂತೆ ಫೆ.27ರಂದು ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳನ್ನು ದಾನ ಮಾಡಲಾಗಿದ್ದು, 6 ಜನರ ಜೀವ ಉಳಿಸಲು ಸಹಾಯವಾಗಿದೆ. ಜೀವನಸಾರ್ಥಕತೆ ಪ್ರೋಟೋಕಾಲ್ ಮತ್ತು ನಿರ್ಧಾರಗಳ ಪ್ರಕಾರ, ಯಕೃತ್ ಅನ್ನು ಅಸ್ಟರ್ ಸಿ ಎಂ ಐ ಆಸ್ಪತ್ರೆ ,ಬೆಂಗಳೂರು, ಒಂದು ಮೂತ್ರಪಿಂಡವನ್ನು ಎ ಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು, ಒಂದು ಮೂತ್ರಪಿಂಡ ಹಾಗೂ ಚರ್ಮ ವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು. ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಉಪ್ಪುಂದ ಮಡಿಕಲ್ ಗದ್ದೆಮನೆ ನಿವಾಸಿಯಾದ  ಶಿಲ್ಪಾ ಅವರು ನಾಗೂರಿನ ಗುಂಜಾನುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬಡ್ತಿ ಹೊಂದಿ ಎರಡು ವರ್ಷಗಳ ಹಿಂದೆ ಮರವಂತೆ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದರು. ಶಿಲ್ಪಾ ಟೀಚರ್ ಅನತಿ ಕಾಲದಲ್ಲೇ ವಿದಾರ್ಥಿ ಮತ್ತು ಪೋಷಕರ ಮೆಚ್ಚುಗೆ ಗಳಿಸಿದ್ದರು. ಮಂಗಳವಾರ ಬೆಳಿಗ್ಗೆ ಅವರ ಮೃತದೇಹವನ್ನು ಮರವಂತೆ ಶಾಲೆಗೆ ತಂದಾಗ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸಾರ್ವಜನಿಕರು ಸೇರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅಂತಿಮ ವಿದಾಯ ಕೋರಿದರು. ಅವರ ಗೌರವಾರ್ಥ ಶಾಲೆಗೆ ರಜೆ ನೀಡಲಾಗಿತ್ತು. ಶಿಲ್ಪಾ ಅವರು ಆರ್.ಎಸ್.ಎಸ್ ಮುಂದಾಳು ಪತಿ ಪ್ರಸನ್ನ ಕುಮಾರ್ ಉಪ್ಪುಂದ, ಓರ್ವ ಪುತ್ರ ಓರ್ವ ಪುತ್ರಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.

ಶಿಲ್ಪಾ ಅವರ ಕುಟುಂಬದ ಈ ಅಂಗಾಂಗ ದಾನದ ಈ ಉದಾತ್ತ ನಿರ್ಧಾರವು ಜನರ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದೆ ಮತ್ತು ಇತರರು ಇದನ್ನು ಅನುಕರಿಸುವ ಅಗತ್ಯವಿದೆ. – ಡಾ. ಅವಿನಾಶ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು

Click here

Click here

Click here

Click Here

Call us

Call us

Leave a Reply