ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೊಡ್ಲಾಡಿ ಮಾರ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಬೆಳಕು ತಂಡ ಬಣ್ಣ ಬಳಿದು ಹೊಸ ನೋಟ ಬೀರುವಂತೆ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನ ಬೆಳಕು ಸಂಸ್ಥೆಯ 25 ಜನರ ತಂಡ ಎರಡು ದಿನಗಳ ಕಾಲ ಶಾಲೆಯಲ್ಲಿ ಬಿಡುಬಿಟ್ಟು ಶಾಲಾ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಶಾಲೆಗೆ ನವರೂಪ ನೀಡಿದ್ದಾರೆ. ತಂಡದ ಕಲಾವಿದರು ಭಾರತ, ಕರ್ನಾಟಕ, ಉಡುಪಿ ಜಿಲ್ಲೆಯ ಭೂಪಟ, ವರ್ಣಮಾಲೆ, ಭೂಗೋಳ, ಮಾನವನ ದೇಹದ ಅಂಗಾಗಗಳು ಸೇರಿದಂತೆ ಹಲವು ಚಿತ್ರಕಲೆಗಳನ್ನು ಗೋಡೆಯ ಮೇಲೆ ಅಂದವಾಗಿ ಬಿಡಿಸಿದ್ದಾರೆ. ಅಂದಾಜು 1 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಸುಣ್ಣ ಬಣ್ಣ ಹಾಗೂ ಪರಿಕರಗಳನ್ನು ಬೆಳಕು ತಂಡ ಶಾಲೆಗೆ ದೇಣಿಗೆಯಾಗಿ ನೀಡಿದೆ.
ಬೆಳಕು ತಂಡ 10ಕ್ಕೂ ಅಧಿಕ ಸರಕಾರಿ ಶಾಲೆ ನವೀಕರಣ, ಅನಾಥಾಶ್ರಮ ಗೋಶಾಲೆ ಇತ್ಯಾದಿ ಸಮಾಜಮುಖಿ ಕಾರ್ಯಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ತೊಡಗಿಕೊಂಡಿದೆ ಎನ್ನುತ್ತಾರೆ ಮಂಡ್ಯ ಅಪ್ಸರ ಆರ್ಟ್ಸ್ ವಿನಯ್
ಎರಡನೇ ದಿನದ ಕೊನೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ರತ್ನಾಕರ ನಾಯ್ಕ, ಪ್ರವೀಣ್ ಕುಮಾರ್ ಶೆಟ್ಟಿ, ಯೋಗೇಂದ್ರ ನಾಯ್ಕ ಕೊಡ್ಲಾಡಿ, ವಿದ್ಯಾಧರ ಶೆಟ್ಟಿ, ನಿವೃತ್ತ ಯೋಧರು ಶಿವರಾಮ ನಾಯ್ಕ, ಉದಯಕುಮಾರ್ ಉಪಸ್ಥಿತರಿದ್ದರು. ಬೆಳಕು ತಂಡವನ್ನು ಶಾಲೆಗೆ ಕರೆತಂದ ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಅವರನ್ನಾ ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯರಾದ ಗೌರಿಬಾಯಿ ಸ್ವಾಗತಿಸಿದರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಶಂಕರ್ ಬಿ.ಕೆ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಗಜೇಂದ್ರ ನಾಯ್ಕ ಧನ್ಯವಾದ ಸಮರ್ಪಸಿದರು. ಶಿಕ್ಷಕರಾದ ಗಣೇಶ್ ಸಿ.ಎನ್ ಕಾರ್ಯಕ್ರಮ ನಿರೂಪಿಸಿದರು.