ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆಯಲ್ಲಿ ವೇಳೆ ಸಂಸದರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಅವರ ಅಭಿಮಾನಿಗಳು ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ಬುಧವಾರ ನಡೆದಿದೆ.
ತಾಲೂಕು ಆಡಳಿತ ಸೌಧದ ಉದ್ಘಾಟನೆಯ ವೇದಿಕೆಯಲ್ಲಿ ಹಾಕಲಾಗಿದ್ದ ಕಾರ್ಯಕ್ರಮದ ಕಟೌಟ್ನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಪೋಟೋ ಚಿಕ್ಕದಾಗಿ ಮುದ್ರಿಸಿದ್ದು, ಉಸ್ತುವಾರಿ ಸಚಿವರು ಹಾಗೂ ಶಾಸಕರ ಪೋಟೋವನ್ನು ದೊಡ್ಡದಾಗಿ ಹಾಕಲಾಗಿತ್ತು. ಇದು ಆಡಳಿತ ಸೌಧಕ್ಕೆ ಅನುದಾನ ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸದರಿಗೆ ಮಾಡಿದ ಅವಮಾನ ಎಂದು ಅಭಿಮಾನಿಗಳು ಜಿಲ್ಲಾಧಿಕಾರಿಗಳನ್ನು ಸ್ಥಳದಲ್ಲಿಯೇ ಪ್ರಶ್ನಿಸಿದ್ದಾರೆ. ಅಲ್ಲದೇ ಸಂಸದರನ್ನು ನಿರ್ಲಕ್ಷ್ಯಿಸಿರುವುದನ್ನು ಖಂಡಿಸಿ ವೇದಿಕೆಯ ಕೆಳಗಿನಿಂದ ಸಂಸದರಿಗೆ ಜೈಕಾರ ಹಾಕಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮಾಜಿ ತಾಪಂ ಉಪಾಧ್ಯಕ್ಷ, ಬಿಜೆಪಿ ಮುಖಂಡ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ ಮಾತನಾಡಿ, ಬೈಂದೂರು ತಾಲೂಕಿಗೆ ಅತಿ ಹೆಚ್ಚು ಅನುದಾನ ತಂದವರು ಸಂಸದ ಬಿ.ವೈ. ರಾಘವೇಂದ್ರ ಅವರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವರ ಪೋಟೋವನ್ನು ನಾಮಕಾವಸ್ಥೆಗೆ ಹಾಕಿ, ಅವಮಾನ ಮಾಡಲಾಗಿದೆ. ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ. ಬೈಂದೂರಿನಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿದರು.
ವಿಹಿಂಪ ಮುಖಂಡ ಶ್ರೀಧರ ಬಿಜೂರು ಮಾತನಾಡಿ, ಬೈಂದೂರು ಅಭಿವೃದ್ಧಿಗೆ ಯಾರ ಪಾತ್ರ ಮುಖ್ಯವಾಗಿದೆ ಎಂದು ಜನರಿಗೆ ತಿಳಿದಿದೆ. ಆದರೆ ಪ್ರತಿ ಕಾರ್ಯಕ್ರಮದಲ್ಲಿಯೂ ಸಂಸದರನ್ನು ಹೀಗೆ ಕಡೆಗಣನೆ ಮಾಡಲಾಗುತ್ತಿದೆ. ಬೈಂದೂರು ಅಭಿವೃದ್ಧಿಗೆ ಕಂಕಣತೊಟ್ಟು ನಿಂತ ಸಂಸದರಿಗೆ ಈ ಬಗೆಯಲ್ಲಿ ಅವಮಾನ ಮಾಡುವುದು ಸರಿಯಲ್ಲ. ಬೈಂದೂರು ಶಾಸಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ವಿರೋಧ ವ್ಯಕ್ತವಾದ ಬಳಿಕ ಸಂಸದರ ಕಟೌಟ್ ಒಂದನ್ನು ತಂದು ನಿಲ್ಲಿಸಲಾಗಿತ್ತು. ಸಭೆಯಲ್ಲಿ ಈ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದಂತೆ ಸ್ವತಃ ಸಂಸದರೇ ಕಟೌಟನ್ನು ತೆರವುಗೊಳಿಸಿ, ಸರಕಾರಿ ಕಾರ್ಯಕ್ರಮದಲ್ಲಿ ಹೀಗೆ ತಪ್ಪು ಅಭಿಪ್ರಾಯ ಮೂಡಿಸುವುದು ಬೇಡ ಎಂದು ಭಿನ್ನಾಭಿಪ್ರಾಯಕ್ಕೆ ತೆರೆ ಎಳೆದರು. ಸಂಸದರ ಪೋಟೋ ಹಾಕದೇ ರಾಜಕೀಯ ಮಾಡಹೊರಟವರಿಗೆ, ಸಂಸದರ ಈ ನಡೆಯಿಂದ ಅವಮಾನವಾದಂತಾಗಿದೆ ಎಂದು ಸಂಸದರ ಅಭಿಮಾನಿಗಳು ಹೇಳಿದ್ದಾರೆ/ ಕುಂದಾಪ್ರ ಡಾಟ್ ಕಾಂ ಸುದ್ದಿ/