ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಎಪ್ರಿಲ್ 07, 08, ಹಾಗೂ 09 ರಂದು ಪ್ರತಿದಿನ ಸಂಜೆ 6:30ಕ್ಕೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.
ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸುರಭಿ ಅಧ್ಯಕ್ಷ ನಾಗರಾಜ ಪಿ. ಅವರು ಮಾಹಿತಿ ನೀಡಿ, ಭರತನಾನಾಟ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ಯಕ್ಷಗಾನ, ಜಾದೂ ಮೊದಲಾದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಕಲಾವಿದರುಗಳಿಗೆ ತರಬೇತಿ ನೀಡುತ್ತಾ ಸಾಂಸ್ಕೃತಿಕ ಛಾಪು ಮೂಡಿಸಿರುವ ಸುರಭಿ ಬೈಂದೂರು 23ನೇ ವರ್ಷದ ಸಂಭ್ರಮದೊಂದಿಗೆ ಮುನ್ನಡೆಯುತ್ತಿದೆ. ಪ್ರತಿವರ್ಷದಂತೆ ಈ ಭಾರಿ 3 ದಿನಗಳ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಎ.7ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕುಂದಾಪುರ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ನಾಗರಾಜ ಕೆ. ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ. ಅಂದು ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತ ಮಂಜುನಾಥ ಡಿ.ಕೆ., ಚದುರಂಗದ ಬಾಲ ಪ್ರತಿಭೆ ರಿತೇಶ್ ಆರ್.ಕೆ ಅವರನ್ನು ಸನ್ಮಾನಿಸಲಾಗುತ್ತದೆ.
ಅಂದು ನಡೆಯಲಿರುವ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಸುರಭಿಯ ಬಾಲಯಕ್ಷ ಕಲಾವಿದರಿಂದ ’ಮಾಯಾಪುರಿ’ ಯಕ್ಷಗಾನ, ಮಾತೆಯರಿಂದ ’ಸುಧನ್ವಾರ್ಜುನ’ ಯಕ್ಷಗಾನ ಹಾಗೂ ಸುರಭಿ ಕಲಾವಿದರಿಂದ ’ಕಂಸ ದಿಗ್ವಿಜಯ’ ಯಕ್ಷಗಾನ ಹಾಗೂ ’ಯಕ್ಷನೃತ್ಯ’ವು ಪ್ರಶಾಂತ ಮಯ್ಯ ದಾರಿಮಕ್ಕಿ ಅವರ ನಿರ್ದೇಶನದಲ್ಲಿ ಜರುಗಲಿದೆ.
ಎ.8ರಂದು ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಚಿತ್ರ ಕಲಾವಿದ ಸುಪ್ರಿತ್ ಆಚಾರ್ಯ ಅವರನ್ನು ಸನ್ಮಾಯಿಸಲಾಗುತ್ತದೆ.
ಬಳಿಕ ಸುರಭಿ ಸಂಗೀತ ವಿದ್ಯಾರ್ಥಿಗಳಿಂದ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ನಿರ್ದೇಶನದಲ್ಲಿ ಗಾನ ಲಹರಿ, ಸುರಭಿ ನೃತ್ಯ ವಿದ್ಯಾರ್ಥಿಗಳಿಂದ ವಿದೂಷಿ ಮಾನಸ ರಾಘವೇಂದ್ರ ಅವರ ನಿರ್ದೇಶನದಲ್ಲಿ ’ನೃತ್ಯ ವೈವಿಧ್ಯ’, ಸುರಭಿ ಕಲಾ ವಿದ್ಯಾರ್ಥಿಗಳಿಂದ ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ನಿರ್ದೇಶನದಲ್ಲಿ ’ನಾದ ಕುಂಚ ಸಂಭ್ರಮ’ ಜರುಗಲಿದೆ.
ಎ.9ರ ರವಿವಾರ ಬೈಂದೂರಿನ ಪ್ರತಿಷ್ಠಿತ ’ಬಿಂದುಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುತ್ತಿರುವ ಬಿಂದಶ್ರೀ ಪ್ರಶಸ್ತಿಗೆ ಈ ಭಾರಿ ಉಪ್ಪಿನಕುದ್ರು ಶ್ರೀ ಗಣೇಶ್ ಯಕ್ಷಗಾನ ಗೊಂಬೆಯಾಟ ಅಕಾಡೆಮಿಯ ಭಾಸ್ಕರ ಕೊಗ್ಗ ಕಾಮತ್ ಅವರು ಆಯ್ಕೆಯಾಗಿದ್ದು, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ವಸಂತ ಹೆಗ್ಡೆ ವಹಿಸಲಿದ್ದು, ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರುವರು.
ಬಳಿಕ ಸುರಭಿ ಭರತನಾಟ್ಯ ವಿದ್ಯಾರ್ಥಿಗಳಿಂದ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ನಿರ್ದೇಶನದಲ್ಲಿ ’ನೃತ್ಯಾಂಕುರ’ ನಾಟ್ಯವೈವಿಧ್ಯ ಹಾಗೂ ’ಪಾಶುಪತಾಸ್ತ್ರ’ ನೃತ್ಯರೂಪಕ ಪ್ರದರ್ಶನ ಹಾಗೂ ಸುರಭಿಯ ರಂಗ ಕಲಾವಿದರಿಂದ ’ರಂಗ ಗೀತೆಗಳು’ ಗಾಯನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು, ಖಜಾಂಚಿ ಸುರೇಶ್ ಹುದಾರ್ ಉಪಸ್ಥಿತರಿದ್ದರು.