ಬೈಂದೂರು ವಿಧಾನಸಭಾ ಕ್ಷೇತ್ರ: ನೈಜ ಅಭಿವೃದ್ಧಿ ಆಗಿದ್ದು ಅಲ್ಪ. ಆಗಬೇಕಾದ್ದು ಸಾಕಷ್ಟು

Click Here

Call us

Call us

Call us

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು:
ಕಡಲ ತಡಿ ಮತ್ತು ಸಹ್ಯಾದ್ರಿ ಶಿಖರಶ್ರೇಣಿಯ ನಡುವೆ ಹಚ್ಚ ಹಸುರನ್ನು ಹೊದ್ದು ಮಲಗಿರುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ನಿಧಾನಕ್ಕೆ ಏರುತ್ತಿದೆ. ಸದ್ಯ ಕ್ಷೇತ್ರದಲ್ಲಿ ಬೇಕು – ಬೇಡ, ಬೇಡಿಕೆಗಳದ್ದೇ ಮಾತು.

Call us

Click Here

ತೀರಾ ಹಿಂದುಳಿದ, ಗುಡ್ಡಗಾಡು ಪ್ರದೇಶವನ್ನು ಒಳಗೊಂಡ ವಿಧಾನಸಭಾ ಕ್ಷೇತ್ರವೆಂಬ ಹಣೆಪಟ್ಟಿ ಹೊಂದಿರುವ ಬೈಂದೂರು ಸುಮಾರು 110 ಕಿ.ಮೀ ಪಶ್ಚಿಮ ಘಟ್ಟ ಹಾಗೂ 40 ಕಿ.ಮೀ ಪಶ್ಚಿಮ ಕರಾವಳಿ ಪ್ರದೇಶವನ್ನೊಳಗೊಂಡಿದ್ದು, ಭೌಗೋಳಿಕವಾಗಿ ವಿಸ್ತಾರವಾಗಿದೆ. 2008ರಲ್ಲಿ ಕ್ಷೇತ್ರ ಮರುವಿಂಗಡನೆಯ ಸಂದರ್ಭ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಕುಂದಾಪುರದ ಕೆಲವು ಭಾಗಗಳು ಸೇರ್ಪಡೆಗೊಂಡಿದೆ. ಅಲ್ಲದೇ ಇದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಸೇರ್ಪಡೆಗೊಂಡಿತ್ತು. ಕುಂದಾಪುರ ತಾಲೂಕಿನ ಭಾಗವಾಗಿದ್ದ ಬೈಂದೂರು 2018ರಲ್ಲಿ ಸ್ವತಂತ್ರ ತಾಲೂಕಾಯಿತು.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮ, ವಾಣಿಜ್ಯೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅನುಭವದ ಕೊರತೆಯಿಂದಾಗಿಯೇ ಅಭಿವೃದ್ಧಿ ಎಂಬುದು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೇ ಸೀಮಿತವಾಗಿದೆ. ನೀರು, ರಸ್ತೆ, ಸೇತುವೆ, ಆರೋಗ್ಯ ಸೇವೆ, ಶಾಲಾ ಕಟ್ಟಡ ದುರಸ್ತಿ, ನಿವೇಶನ – ಹಕ್ಕುಪತ್ರ ವಿತರಣೆ ನಿತ್ಯದ ಗೋಳಾಗಿದೆ. /ಕುಂದಾಪ್ರ ಡಾಟ್ ಕಾಂ ವರದಿ/

ಕಂದನಾಡ ಸಂಸ್ಕೃತಿ:
ಬೈಂದೂರಿನದು ಅಪ್ಪಟ ಕುಂದ ಕನ್ನಡ ಸಂಸ್ಕೃತಿ. ದೈನಂದಿನ ಮಾತು-ಕತೆ, ವ್ಯಾಪಾರ-ವಹಿವಾಟು ಕುಂದಪ್ರ ಕನ್ನಡದಲ್ಲಿ ನಡೆಯುತ್ತೆ. ಹಾಗೆ ಕೊಂಕಣಿ, ಬ್ಯಾರಿ, ಉರ್ದು, ಮರಾಠಿ ಭಾಷಿಕರು ಇದ್ದಾರೆ. ಇಲ್ಲಿ ದೈವಾರಾಧನೆ, ಯಕ್ಷಗಾನ, ನಾಗಾರಾಧನೆಯಂತಹ ಸಂಪ್ರದಾಯಗಳು ಅಚ್ಚುಕಟ್ಟಾಗಿ ಮುಂದುವರೆದುಕೊಂಡು ಬಂದಿವೆ.

ಮೀನುಗಾರಿಕೆ ಮತ್ತು ಕೃಷಿಯೇ ಜೀವನ:
ಇಲ್ಲಿನ ಜನರ ಬದುಕು ಮೀನುಗಾರಿಕೆ ಮತ್ತು ಕೃಷಿಯನ್ನು ಅವಲಂಭಿಸಿದೆ. ರಿಯಲ್ ಎಸ್ಟೇಟ್ ಉದ್ಯಮವೂ ನಿಧಾನಕ್ಕೆ ಬೆಳೆದಿದ್ದು, ಜಾಗಕ್ಕೆ ಚಿನ್ನದ ಬೆಲೆ. ಇದರೊಂದಿಗೆ ಗೋಡಂಬಿ ಹಾಗೂ ಹೊಟೇಲ್ ಉದ್ಯಮ ಇಲ್ಲಿನ ಆರ್ಥಿಕತೆಗೆ ಬಲ ತುಂಬಿದೆ. ಕ್ಷೇತ್ರದ ಅಂದಾಜು 25,000 ಅಧಿಕ ಮಂದಿ ಮುಂಬೈ, ಬೆಂಗಳೂರು, ಹೈದರಾಬಾದ್, ಹುಬ್ಬಳ್ಳಿ ಮೊದಲಾದ ಮಹಾನಗರಗಳಲ್ಲಿ ಹೊಟೆಲ್, ಬೇಕರಿ, ಕ್ಯಾಟರಿಂಗ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/

Click here

Click here

Click here

Call us

Call us

ಹಿರಿಮೆ – ಗರಿಮೆ:
ಬೈಂದೂರಿನ ಒತ್ತಿನೆಣೆ ಕ್ಷಿತಿಜ ನೇಸರ ಧಾಮ ಸೂರ್ಯೋದಯ-ಸೂರ್ಯಾಸ್ತ ಹಾಗು ಚಂದ್ರೋದಯ-ಚಂದ್ರಾಸ್ತ ವೀಕ್ಷಿಸಬಹುದಾದ ರಾಜ್ಯದ ಏಕೈಕ ತಾಣವೆಂಬ ಹೆಗ್ಗಳಿಕೆ ಪಡೆದಿದೆ. ಮರವಂತೆಯು ಸಮುದ್ರ ಹಾಗೂ ನದಿಯ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ವಿಶ್ವಖ್ಯಾತಿ ಪಡೆದಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದೆ. ಹೊಸಂಗಡಿಯಲ್ಲಿ ರಾಜ್ಯದ ಮೊಟ್ಟಮೊದಲ ಭೂಗತ ಜಲವಿದ್ಯುತ್ ಉತ್ಪಾದನಾ ಕೇಂದ್ರವಿದೆ. ಸೌಪರ್ಣಿಕಾ ನದಿಯಂತೆಯೆ ಬೈಂದೂರು ಕ್ಷೇತ್ರದ ಜೀವನದಿಯಾದ ವಾರಾಹಿ ನಾಡಿಗೆ ಬೆಳಕು (230 ಮೆಗಾ ವ್ಯಾಟ್) ನೀಡುತ್ತಿದೆ. ಕೋಸಳ್ಳಿ ಜಲಪಾತ, ಆನೆ ಝರಿ ಚಿಟ್ಟೆ ಧಾಮ ಪ್ರವಾಸೋದ್ಯಮದ ಗರಿಮೆ ಹೆಚ್ಚಿಸಿದೆ. ಇನ್ನು ಹಲವು ಖ್ಯಾತನಾಮ ಕಲಾವಿದರು, ಸಾಹಿತಿಗಳು ವಿವಿಧ ಕ್ಷೇತ್ರಗಳ ಪರಿಣಿತರನ್ನು ದೇಶಕ್ಕೆ ನೀಡಿದ ಹಿರಿಮೆಯೂ ಬೈಂದೂರಿಗಿದೆ.

ರಾಜಕೀಯ ಇತಿಹಾಸ:
ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಯಡ್ತರೆ ಮಂಜಯ್ಯ ಶೆಟ್ಟಿ, ಎ.ಜಿ ಕೊಡ್ಗಿ, ಜಿ ಎಸ್ ಆಚಾರ್ ತಲಾ ಎರಡು ಬಾರಿ, ಗೋಪಾಲ ಪೂಜಾರಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಬರೋಬ್ಬರಿ ಹನ್ನೊಂದು ಬಾರಿ ಕಾಂಗ್ರೆಸ್ ಜಯಗಳಿಸಿದ್ದರೆ, ಮೂರು ಬಾರಿ ಬಿಜೆಪಿ, ಒಂದು ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ. ಆದರೆ ಯಾರೂಬ್ಬರಿಗೂ ಈತನಕ ಮಂತ್ರಿಯಾಗುವ ಭಾಗ್ಯ ದೊರೆತಿಲ್ಲ. ಚುನಾವಣೆಯಲ್ಲಿ ಸಿಪಿಐ(ಎಂ), ಜೆಡಿಎಸ್, ಉತ್ತಮ ಪ್ರಜಾಕೀಯ ಮೊದಲಾದ ಪಕ್ಷಗಳ ಅಭ್ಯರ್ಥಿಗಳು ಸ್ವರ್ಧಾ ಕಣದಲ್ಲಿದ್ದರೂ ನೇರಾ ಹಣಾಹಣಿ ಇರುವುದು ಬಿಜೆಪಿ – ಕಾಂಗ್ರೆಸ್ ನಡುವೆ ಮಾತ್ರ. /ಕುಂದಾಪ್ರ ಡಾಟ್ ಕಾಂ ವರದಿ/

1957ರಲ್ಲಿ ಕ್ಷೇತ್ರ ವಿಭಜನೆಯಾಗಿ ಪ್ರತ್ಯೇಕ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ಉದಯವಾಯಿತು. ಕ್ಷೇತ್ರದ ಮೊದಲ ಶಾಸಕರಾಗಿ ಯಡ್ತರೆ ಮಂಜಯ್ಯ ಶೆಟ್ಟಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅವರಿಗೆ ಪ್ರತಿಸ್ಪರ್ಧಿಯೆ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿ ಕ್ಷೇತ್ರದ ಮೊದಲ ಶಾಸಕರಾಗಿ ಹೆಗ್ಗಳಿಕೆ ಗಳಿಸಿದ್ದರು.

ಮಂಜಯ್ಯ ಶೆಟ್ಟರು 1962ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದ ಸುಬ್ಬರಾವ್ ಹಲ್ಸನಾಡ್ರನ್ನು 1,839 ಮತಗಳಿಂದ ಸೋಲಿಸಿ ಚುನಾಯಿತರಾಗಿದ್ದರು. ಹಲ್ಸನಾಡ್ ಸುಬ್ಬರಾವ್ (ಪಿಎಸ್ಪಿ) ಮತ್ತು ಅಮಾಸೆಬೈಲ್ ಗೋಪಲಕೃಷ್ಣ ಕೊಡ್ಗಿ (ಕಾಂಗ್ರೆಸ್) 1967ರಲ್ಲಿ ಮುಖಾಮುಖಿಯಾಗಿದ್ದರು. ಈ ಚುನಾವಣೆಯಲ್ಲಿ ಪಿಎಸ್ಪಿಯ ಹಲ್ಸನಾಡ್ ಆಯ್ಕೆಯಾಗಿದ್ದರು. 1972ರಲ್ಲಿ ಎ.ಜಿ.ಕೊಡ್ಗಿ 9,496 ಮತ ಗಳಿಸಿ ಶಾಸಕರಾದರು. 1978ರಲ್ಲಿ ಜನತಾ ಪಕ್ಷದ ಎಲ್ವಿನ್ ಪಿಂಟೋರನ್ನು ಸೋಲಿಸಿದ ಕೊಡ್ಗಿ ಎರಡನೇ ಬಾರಿ ಶಾಸಕರಾದರು. 1983ರಲ್ಲಿ ಕಾಂಗ್ರೆಸ್ನ ಪ್ರಬಲ ಅಭ್ಯರ್ಥಿ ಜಿ.ಎಸ್.ಆಚಾರ್ರನ್ನು ಜನತಾ ಪಕ್ಷದ ಅಪ್ಪಣ್ಣ ಹೆಗ್ಡೆ ಕೇವಲ 24 ಮತಗಳಿಂದ ಸೋಲಿಸಿ ಶಾಸನ ಸಭೆಗೆ ಹೋದರು. 1985ರಲ್ಲಿ ಜಿ.ಎಸ್.ಆಚಾರ್ ಜನತಾ ಪಕ್ಷದ ಮಾಣಿ ಗೋಪಾಲ್ರ ಎದುರು ಕೇವಲ 314 ಮತದ ಅಂತರದಿಂದ ಗೆದ್ದರು. ಮಾಣಿ ಗೋಪಾಲರಿಗೆ 1989ರಲ್ಲೂ ಅದೃಷ್ಟ ಕೈಕೊಟ್ಟಿತ್ತು. ಜನತಾ ದಳದ ಅಭ್ಯರ್ಥಿಯಾಗಿದ್ದ ಮಾಣಿ ಗೋಪಾಲ್ರನ್ನು ಕಾಂಗ್ರೆಸ್ನ ಜಿ.ಎಸ್. ಆಚಾರ್ ಬರೀ 509 ಮತದಿಂದ ಸೋಲಿಸಿದ್ದರು. 1994ರ ಚುನಾವಣೆಲ್ಲಿಯಲ್ಲಿ ಬಿಜೆಪಿ ಹುರಿಯಾಳು ಐಎಂಜೆ ಕಾಂಗ್ರೆಸ್ನ ಮಾಣಿಗೋಪಾಲರನ್ನು 18,541 ಮತಗಳ ದೊಡ್ಡ ಅಂತರದಲ್ಲಿ ಸೋಲಿಸಿದರು.

1998ರಲ್ಲಿ ಐಎಂಜೆ ಉಡುಪಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರಿಂದ ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಕೆ ಗೋಪಾಲ ಪೂಜಾರಿ ಜಯಗಳಿಸಿದರು. 1999 ಮತ್ತು 2004ರಲ್ಲಿಯೂ ಇಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು ಗೋಪಾಲ ಪೂಜಾರಿ ಗೆಲುವು ಸಾಧಿಸಿದ್ದರು. 2008ರಲ್ಲಿ ಗೋಪಾಲ ಪೂಜಾರಿ ಸೋಲನುಭವಿಸಬೇಕಾಯಿತು. ಆ ಚುನಾವಣೆಯಲ್ಲಿ ಬಿಜೆಪಿಯ ಕೆ. ಲಕ್ಷೀನಾರಾಯಣ ಅವರು 7,970 ಮತಗಳನ್ನು ಪಡೆದು ಶಾಸಕರಾದರು.

ಆದರೆ, 2013ರ ಚುನಾವಣೆಯಲ್ಲಿ ಮತ್ತೆ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಬಂತು. ಗೋಪಾಲ ಪೂಜಾರಿ 82,277 ಮತಗಳನ್ನು ಪಡೆದು ಬಿಜೆಪಿಯ ಸುಕುಮಾರ ಶೆಟ್ಟಿ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದರು. ಆದರೆ 2018ರ ಚುನಾವಣೆಯಲ್ಲಿ ಹಿಂದಿನ ಚುನಾವಣೆಯ ಅಂತರವವನ್ನು ಮೆಟ್ಟಿ ನಿಲ್ಲಲು ಯಶಸ್ವಿಯಾದ ಬಿಜೆಪಿ ಅಭ್ಯರ್ಥಿ ಸುಕುಮಾರ ಶೆಟ್ಟಿ ಅವರು ಗೋಪಾಲ ಪೂಜಾರಿಯವರನ್ನು 24,393 ಮತಗಳ ಅಂತರದಿಂದ ಸೋಲಿಸಿ ಶಾಸಕ ಸ್ಥಾನ ಅಲಂಕರಿಸಿದರು. /ಕುಂದಾಪ್ರ ಡಾಟ್ ಕಾಂ ವರದಿ/

ಕಾಂಗ್ರೆಸ್ ಪಕ್ಷದಿಂದ 7ನೇ ಭಾರಿ ಗೋಪಾಲ ಪೂಜಾರಿ ಸ್ಪರ್ಧೆ:
ಈ ಭಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಲ್ಕು ಭಾರಿ ಶಾಸಕರಾಗಿದ್ದ ಕೆ. ಗೋಪಾಲ ಪೂಜಾರಿ ಅವರು ಸ್ಪರ್ಧಾ ಕಣದಲ್ಲಿದ್ದಾರೆ. ಆರಂಭದಿಂದಲೂ ಕಾಂಗ್ರೆಸ್ ಪಕ್ಷದ ಏಕಮೇವ ಟಿಕೆಟ್ ಆಕಾಂಕ್ಷಿಯಾಗಿ ಗೋಪಾಲ ಪೂಜಾರಿ ಅವರೇ ಗುರುತಿಸಿಕೊಂಡಿದ್ದಾರೆ. ಈ ಮಧ್ಯೆ ಉದ್ಯಮಿ ಯು.ಬಿ. ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರ ಹೆಸರುಗಳು ಕೇಳಿಬಂದಿತ್ತಾದರೂ, ಅಂತಿಮವಾಗಿ ಕೆ. ಗೋಪಾಲ ಪೂಜಾರಿ ಅವರೇ ಟಿಕೆಟಿಗಾಗಿ ಅರ್ಜಿ ಸಲ್ಲಿಸಿದ್ದರಿಂದ ಎಲ್ಲಾ ಗೊಂದಲಗಳು ಬಗೆಹರಿದಿದು ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

ಬಿಜೆಪಿಯಲ್ಲಿ ಹಲವು ಟಿಕೆಟ್ ಆಕಾಂಕ್ಷಿ:
ಹಾಲಿ ಶಾಸಕರಾಗಿರುವ ಸುಕುಮಾರ್ ಶೆಟ್ಟಿ ಈ ಬಾರಿಯೂ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಕಳೆದ 5 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಟಿಕೆಟ್ ನಿರಾಕರಿಸಲು ಕಾರಣಗಳಿಲ್ಲ. ಹಾಗಾಗಿಯೇ ಮತ್ತೆ ಟಿಕೆಟ್ ನಿರೀಕ್ಷೆಯಲ್ಲಿದ್ದೇನೆ ಎಂದು ಶಾಸಕರು ಹೇಳಿಕೊಂಡಿದ್ದಾರೆ.

ಆದರೆ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಗೆ ಹೊಸಬರಿಗೆ ಟಿಕೆಟ್ ನೀಡಲಿದೆ ಎಂಬ ಸುದ್ದಿ ಮುನ್ನೆಲೆಗೆ ಬರುತ್ತಿದ್ದಂತೆ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ. 2013ರಲ್ಲಿ ಬಿಜೆಪಿ ಟಿಕೆಟಿನಿಂತ ವಂಚಿತರಾಗಿದ್ದ ಕೆ. ಬಾಬು ಶೆಟ್ಟಿ, ಆರ್.ಎಸ್.ಎಸ್ ಹಾಗೂ ಪಕ್ಷ ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಗುರುರಾಜ ಗಂಟಿಹೊಳೆ ಪ್ರಮುಖವಾಗಿ ಕೇಳಿಬಂದಿದೆ. ಆರ್.ಎಸ್.ಎಸ್ ಪ್ರಚಾರಕರಾಗಿ ತೊಡಗಿಕೊಂಡು ನಿಸ್ವಾರ್ಥ ಸಮಾಜ ಸೇವೆಗೈದ ಗುರುರಾಜ ಗಂಟೆಹೊಳೆ ಕೂಡ ಪ್ರಬಲ ಆಕಾಂಕ್ಷಿ. ಅವರು ಕಳೆದ ಎರಡು ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗೆ ಪರ ಟೊಂಕಕಟ್ಟಿ ಕೆಲಸ ಮಾಡಿದ್ದರು. ಕಳೆದ ಮೂರು ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಜೊತೆಗೆ ಎರಡು ಭಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಕೆ. ಬಾಬು ಶೆಟ್ಟಿ ತನಗೆ ಟಿಕೆಟ್ ನೀಡುವಂತೆ ಬೇಡಿಕೆ ಇರಿಸಿದ್ದಾರೆ.

ಉಳಿದಂತೆ ಕೆ. ಜಯಪ್ರಕಾಶ್ ಹೆಗ್ಡೆ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದೆ. ಇನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ, ಮಾಜಿ ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ, ಉದ್ಯಮಿ ನಿತಿನ್ ನಾರಾಯಣ, ಸುಖಾನಂದ ಶೆಟ್ಟಿ ಮೊದಲಾದವರು ಹೆಸರುಗಳು ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.

ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ, ಬಿಜೆಪಿ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುವುದು ಕುತೂಹಲವಿದೆ. ಎರಡು ಬಂಟ, ಓರ್ವ ಬ್ರಾಹ್ಮಣ, ಓರ್ವ ಬಿಲ್ಲವ ಹಾಗೂ ಮೊಗವೀರ ಅಭ್ಯರ್ಥಿಗೆ ಲೆಕ್ಕಾಚಾರದಂತೆ ಟಿಕೆಟ್ ನೀಡಿದರೆ, ಬೈಂದೂರು ಟಿಕೆಟ್ ಬಂಟ ಸಮುದಾಯದ ಅಭ್ಯರ್ಥಿಗಳಿಗೇ ದೊರೆಯುವ ಸಾಧ್ಯತೆಗಳಿದೆ. /ಕುಂದಾಪ್ರ ಡಾಟ್ ಕಾಂ ವರದಿ/

ಮತದಾರರು:
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿವೆ. ಕ್ಷೇತ್ರದಲ್ಲಿ ಒಟ್ಟು 2,32,723 ಮತದಾರರಿದ್ದು, ಈ ಪೈಕಿ 1,13,758 ಪುರುಷರು ಹಾಗೂ 1,18,962 ಮಹಿಳಾ ಮತದಾರರು ಹಾಗೂ 3 ತೃತೀಯ ಲಿಂಗಿ ಮತದಾರರಿದ್ದಾರೆ. ಈ ಪೈಕಿ 3,672 ಯುವ ಮತದಾರರು, 5865 ಮಂದಿ 80 ವರ್ಷ ದಾಟಿದ ಮತದಾರರು, 3,009 ಪಿಡ್ಬ್ಯೂಡಿ ಮತದಾರರಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/

ಜಾತಿ ಲೆಕ್ಕಾಚಾರ
ಬಿಲ್ಲವ 47,000
ಬಂಟ್ಸ್ 35,000
ಮೊಗವೀರ 30,000
ಮುಸ್ಲಿಂ 18,000
ರಾಮಕ್ಷತ್ರಿಯ 15,000
ದೇವಾಡಿಗ 14,000
ಗಾಣಿಗ 12,000
ಪರಿಶಿಷ್ಟ ಜಾತಿ 13,000
ಬ್ರಾಹ್ಮಣ 9,000

ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆ, ಮಾದರಿ ನೀತಿ ಸಂಹಿತೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಸಂಖ್ಯೆ 08254 – 251657 ಅಥವಾ 9380753009 ಕ್ಕೆ ಕರೆಮಾಡಿ ದೂರು ಸಲ್ಲಿಸಬಹುದಾಗಿದೆ. ಚುನಾವಣಾಧಿಕಾರಿಯಾಗಿ ಜಗದೀಶ್ ಗಂಗಣ್ಣನವರ್ (ಮೊ. 9742094639) ಅವರು ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/

Call now

Leave a Reply