ಕುಂದಾಪುರ: ಜನರ ಅನುಕೂಲಕ್ಕಾಗಿ ಸರಕಾರಿ ಆಡಳಿತ ಕಛೇರಿಗಳನ್ನು ಒಂದೇ ಸೂರಿನಡಿಯಲ್ಲಿ ತರಬೇಕೆಂಬ ಮಹೋದ್ದೇಶದಿಂದ ಕುಂದಾಪುರದಲ್ಲಿ ಮಿನಿ ವಿಧಾನಸೌಧವನ್ನೇ ಕಟ್ಟಿಲಾಗಿದ್ದರೂ ತಾಲೂಕು ಆಡಳಿತದ ಒಣ ಪ್ರತಿಷ್ಠೆಯಿಂದಾಗಿ ಕುಂದಾಪುರ ಸರಕಾರಿ ಆಸ್ಪತ್ರೆ ಎದುರಿನ ಗ್ರಾಮ ಲೆಕ್ಕಿಗರ ಹಳೆ ಕಛೇರಿಯನ್ನು ಕೆಡವಿ ಮತ್ತೆ ಅಲ್ಲಿಯೇ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಅಕ್ರಮ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುತ್ತಿರುವ ಪುರಸಭೆ ಕಾರ್ಯಕ್ಕೆ ಸಾಥ್ ನೀಡಬೇಕಿದ್ದ ತಾಲೂಕು ಆಡಳಿತ, ತನ್ನ ಸರ್ವಾಧಿಕಾರಿ ಧೋರಣೆಯನ್ನು ತೋರಿ ಅಲ್ಲಿಯೇ ಕಟ್ಟಡ ಕಟ್ಟಲು ಹೊರಟಿರುವ ಹಿಂದಿನ ಉದ್ದೇಶವೇನು ಎಂಬುದು ಮಾತ್ರ ಅರಿಯದಾಗಿದೆ.
ಕುಂದಾಪುರದ ಪುರಸಭಾ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆಯೊಂದಿಗೆ ವಾಹನ ದಟ್ಟಣೆಯೂ ಹೆಚ್ಚುತ್ತಿದೆ. ಹಾಗಾಗಿ ಕೆಲವು ತಿಂಗಳಿನಿಂದಿಚೆಗೆ ಅಕ್ರಮ ಒತ್ತುವರಿ ಮಾಡಿಕೊಂಡ ಕಟ್ಟಡಗಳ ಮಾಲಿಕರುಗಳಿಗೆ ನೋಟಿಸ್ ನೀಡಿ, ಯಾರ ಒತ್ತಡಕ್ಕೂ ಮಣಿಯದೇ ತೆರವುಗಳಿಸಲಾಗುತ್ತಿದೆ. ಏತನ್ಮಧ್ಯೆ ಹೂವಿನ ಮಾರುಕಟ್ಟೆಯ ಪಕ್ಕದ ಗ್ರಾಮಲೆಕ್ಕಿಗರ ಕಛೇರಿಗಾಗಿ ಹಳೆ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡ ಕಟ್ಟಲು ತಾಲೂಕು ಆಡಳಿತ ಮುಂದಾಗಿತ್ತು. ಆದರೆ ಜನನಿಬಿಡ ಪ್ರದೇಶವಾದ್ದರಿಂದ ಇಲ್ಲಿನ ಸೆಟ್ ಬ್ಯಾಕ್, ಪಾರ್ಕಿಂಗ್ ವ್ಯವಸ್ಥೆಯನ್ನು ಪರೀಕ್ಷಿಸಿದ ಬಳಕವಷ್ಟೇ ಕಟ್ಟಡ ಕಟ್ಟಲು ಅನುಮತಿ ನೀಡಬೇಕು ಎಂದು ಪುರಸಭಾ ಸದಸ್ಯರು ಆಗ್ರಹಿಸಿದ್ದರು. ಆದರೂ ಇದ್ಯಾವುದನ್ನೂ ಲೆಕ್ಕಿಸದೇ ತರಾರುರಿಯಲ್ಲಿ ಕಟ್ಟಡ ಕಟ್ಟಲಾಗುತ್ತಿದೆ. (ಕುಂದಾಪ್ರ ಡಾಟ್ ಕಾಂ)
ಸರಕಾರ ಜನರ ಅನುಕೂಲಕ್ಕಾಗಿ ಏನೇ ಯೋಜನೆಯನ್ನು ಜಾರಿಗೊಳಿಸಿದರೂ ಅಧಿಕಾರಿಗಳ ಎಡವಟ್ಟಿನಿಂದಾಗಿ ಅದು ಮತ್ತೆ ಜನರಿಗೆ ತೊಂದರೆಯಾಗುವುದೇ ಹೆಚ್ಚು ಎಂಬುದಕ್ಕೆ ಈ ಪ್ರಕರಣವೇ ಉತ್ತಮ ನಿದರ್ಶನ. ಕೋಟಿ ಹಣ ಸುರಿದು ಮಿನಿವಿಧಾನಸೌಧ ಕಟ್ಟಿ ಎಲ್ಲಾ ಕಛೇರಿಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗಿದ್ದರೂ ಗ್ರಾಮಲೆಕ್ಕಿಗರ ಕಛೇರಿಯನ್ನು ಮಾತ್ರ ಅದರಿಂದ ದೂರ ಉಳಿಯುವಂತೆ ಮಾಡಿ ವಿನಾಃ ಕಾರಣ ಜನರನ್ನು ಅತ್ತಿಂದಿತ್ತ, ಇತ್ತಿಂದತ್ತ ತಿರುಗಿವಂತೆ ಮಾಡುವ ಅಗತ್ಯವೇನಿದೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. (ಕುಂದಾಪ್ರ ಡಾಟ್ ಕಾಂ)
– ಸುನಿಲ್ ಹೆಚ್. ಜಿ. ಬೈಂದೂರು