ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಸಮಯದಲ್ಲಿ ನಡೆಯುವ ಹಲವು ಅಕ್ರಮಗಳನ್ನು ತಡೆದು, ಇವುಗಳ ವಿರುದ್ದ ತ್ವರಿತಗತಿಯಲ್ಲಿ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಸೀ ವಿಜಲ್ (cVIGIL) ಆಪ್ ನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದೆ.
ಚುನಾವಣಾ ಸಮಯದಲ್ಲಿ ಮತದಾರಿಗೆ ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುವಂತೆ ವಿವಿಧ ರೀತಿಯ ಅಮಿಷಗಳಾದ ಹಣ ವಿತರಣೆ, ಉಡುಗೊರೆಗಳು ಹಾಗೂ ಕೂಪನ್ ವಿತರಣೆ, ಮದ್ಯ ವಿತರಣೆ, ಅನುಮತಿಯಿಲ್ಲದ ಪೋಸ್ಟರ್ ಗಳು ಮತ್ತು ಬ್ಯಾನರ್ ಬಳಕೆ, ಬಂದೂಕುಗಳ ಪ್ರದರ್ಶನ ಹಾಗೂ ಬೆದರಿಕೆ, ಆಸ್ತಿ ವಿರೂಪ, ಧಾರ್ಮಿಕ ಅಥವಾ ಕೋಮು ಭಾಷಣಗಳು/ಸಂದೇಶಗಳು, ಮತಗಟ್ಟೆಯ 200 ಮೀ ಪ್ರದೇಶದಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಮತದಾನ ದಿನದಂದು ವಾಹನಗಳಲ್ಲಿ ಮತದಾರರ ಸಾಗಣೆ ಮುಂತಾದ ಯಾವುದೇ ರೀತಿಯ ಪ್ರಲೋಭನೆ ಹಾಗೂ ಬೆದರಿಕೆ ಹಾಗೂ ಮಾದರಿ ನೀತಿ ಸಂಹಿತೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರೇ ನೇರವಾಗಿ ಸಿ ವಿಜಿಲ್ ಆಪ್ ನಲ್ಲಿ ಅದರ ಬಗ್ಗೆ ದೂರು ದಾಖಲು ಮಾಡಬಹುದಾಗಿದೆ.
ಸಿ ವಿಜಲ್ ಮೂಲಕ ಸಲ್ಲಿಸುವ ದೂರುಗಳು ಸ್ವಯಂ ಸ್ಥಳವನ್ನು ತೋರಿಸುವ ಸೌಲಭ್ಯದೊಂದಿಗೆ ಪ್ರಕರಣ ನಡೆದ ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಸಲಿದೆ.
ಸಾರ್ವಜನಿಕರು ಆಂಡ್ರಾಯ್ಡ್ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಲ್ಲಿ ಸಿ ವಿಜಿಲ್ ಅಪ್ ನ್ನು ಡೌನ್ ಲೋಡ್ ಮಾಡಿಕೊಂಡು ಅತ್ಯಂತ ಸುಲಭ ರೀತಿಯಲ್ಲಿ ಇದನ್ನು ಬಳಸಬಹುದಾಗಿದ್ದು, ಅಕ್ರಮದ ಕುರಿತ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಸಲ್ಲಿಸಬಹುದಾಗಿದೆ. ದೂರು ನೀಡುವ ಸಾರ್ವಜನಿಕರ ಹೆಸರುಗಳನ್ನು ಗೋಪ್ಯವಾಗಿಡಲಾಗುವುದು.
ಸಿ ವಿಜಿಲ್ ನಲ್ಲಿ ದಾಖಲಾಗುವ ದೂರುಗಳನ್ನು ನಿರ್ವಹಿಸಲು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಅವರು ಮತದಾನ ಮುಕ್ತಾಯವಾಗುವರೆಗೂ 3 ಪಾಳಿಯಲ್ಲಿ 24*7 ಕಾರ್ಯನಿರ್ವಹಿಸುತ್ತಿದ್ದಾರೆ. ದೂರುಗಳು ಬಂದ ಕೂಡಲೇ ಅವುಗಳನ್ನು ಪರಿಶೀಲಿಸಿ, ಸದ್ರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿಯ ಪ್ಲೈಲಿಂಗ್ ಸ್ಕ್ವಾಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರಗಳ ಮಾಹಿತಿ ನೀಡಲಾಗುವುದು. ಸದ್ರಿ ಮಾಹಿತಿಯ ಆಧಾರದಲ್ಲಿ ಸ್ಥಳಕ್ಕೆ ತಕ್ಷಣದಲ್ಲಿ ಭೇಟಿ ನೀಡುವ ಪ್ಲೆöÊಯಿಂಗ್ ಸ್ಕ್ವಾಡ್ ತಂಡದ ಸಿಬ್ಬಂದಿ ದೂರು ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಗರಿಷ್ಠ 100 ನಿಮಿಷಗಳ ಒಳಗೆ ಆ ದೂರುಗಳನ್ನು ಸಂಪೂರ್ಣ ಇತ್ಯರ್ಥಪಡಿಸಲಾಗುತ್ತದೆ.
ಸಾರ್ವಜನಿಕರು ಸಿ ವಿಜಿಲ್ ಆಪ್ ಮಾತ್ರವಲ್ಲದೇ ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಸಹ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದಾಗಿದ್ದು, ಈ ಮೂಲಕ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲು ಚುನಾವಣಾ ಆಯೋಗದೊಂದಿಗೆ ತಾವೂ ಸಹ ಕೈ ಜೋಡಿಸಬಹುದಾಗಿದೆ.