ಕುಂದಾಪುರ: ಇಂದು ಬೆಳಗ್ಗೆ ಮರವಂತೆಯಲ್ಲಿ ಮೀನುಗಾರಿಕೆಗೆ ಹೊರಟ ಎರಡು ದೋಣಿಗಳಿಗೆ ದೊಡ್ಡ ಗಾತ್ರದ ತೆರೆಗಳು ಅಪ್ಪಳಿಸಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ದೋಣಿಗಳು ಗಂಗೆಮನೆ ಪ್ರಭಾಕರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರಿಗೆ ಸೇರಿವೆ. ತೆರೆ ಅಪ್ಪಳಿಸಿದಾಗ ಎರಡೂ ದೋಣಿಗಳು ಮಗುಚಿಕೊಂಡುವು. ಪ್ರಭಾಕರ ಖಾರ್ವಿ ಅವರ ’ವಿಶ್ವದೇವತೆ’ ಹೆಸರಿನ ದೋಣಿಯ ಬಲೆ ಎಳೆಯುವ ಯಂತ್ರ, ದೋಣಿಯ ಔಟ್‌ಬೋರ್ಡ್ ಯಂತ್ರ, ಫಿಶ್ ಫೈಂಡರ್, ವಯರ್‌ಲೆಸ್ ಹಾಳಾಗಿವೆ. ದೋಣಿಯಲ್ಲಿದ್ದ ಬಲೆ ತೇಲಿಹೋಗಿ ದಡ ಸೇರಿದಾಗ ನಿರಂತರ ಅಪ್ಪಳಿಸಿದ ತೆರೆಗಳಿಂದಾಗಿ ಮರಳಿನಲ್ಲಿ ಹೂತು ಹೋಗಿದೆ. ದೋಣಿಗೂ ಹಾನ ಸಂಭವಿಸಿದೆ. ಮರಳಿನಲ್ಲಿ ಹೂತುಹೋದ ಬಲೆಯನ್ನು ಹಿಟಾಚಿ ಯಂತ್ರ ಬಳಸಿ ಮೇಲೆತ್ತಲಾಯಿತು. ಆದರೆ ಅದರ ಬಹುಭಾಗಕ್ಕೆ ಹಾನಿಯಾಗಿದೆ. ಒಟ್ಟು ನಷ್ಟ ರೂ.10 ಲಕ್ಷ ಎಂದು ಅಂದಾಜಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ)
ಮಂಜುನಾಥ ಖಾರ್ವಿ ಅವರ ವಿಶ್ವೇಶ್ವರಿ ಹೆಸರಿನ ದೋಣಿ ತೆರೆ ಅಪ್ಪಳಿಸಿದಾಗ ದಡದಲ್ಲಿದ್ದ ಕಲ್ಲಿಗೆ ಬಡಿದು ಇಬ್ಭಾಗವಾಗಿದೆ. ಬೋಟ್ ಯಂತ್ರ, ವಯರ್‌ಲೆಸ್ ಮತ್ತು ಜಿಪಿಎಸ್ ಯಂತ್ರಕ್ಕೆ ಹಾನಿಯುಂಟಾಗಿದೆ. ಆಗಿರುವ ನಷ್ಟ ರೂ ೮ ಲಕ್ಷ ಎಂದು ಅವರು ಅಂದಾಜಿಸಿದ್ದಾರೆ.
ಹಾನಿಯ ಸುದ್ದಿ ತಿಳಿದ ತಾಲ್ಲೂಕು ಪಂಚಾಯತ್ ಸದಸ್ಯ ಎಸ್. ರಾಜು ಪೂಜಾರಿ ಬೈಂದೂರು ವಿಶೇಷ ತಹಸಿಲ್ದಾರ್ ಕಿರಣ್ ಗೌರಯ್ಯ ಮತ್ತು ಕುಂದಾಪುರ ಮೀನುಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ ಅವರನ್ನು ಕರೆಸಿ ಹಾನಿಯನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಅದರ ಕುರಿತು ವರದಿ ಸಲ್ಲಿಸುವ ವ್ಯವಸ್ಥೆ ಮಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ, ತಾಲ್ಲೂಕು ಪಂಚಾಯತ್ ಸದಸ್ಯ ಮಹೇಂದ್ರಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ಮಾಜಿ ಅಧ್ಯಕ್ಷ ಎಸ್. ಜನಾರ್ದನ, ಎಂ. ನರಸಿಂಹ ಶೆಟ್ಟಿ, ಸದಸ್ಯರಾದ ನಾಗರಾಜ ಖಾರ್ವಿ, ಲೋಕೇಶ ಖಾರ್ವಿ, ಮಾಜಿ ಸದಸ್ಯ ಮನ್ಸೂರ್ ಇಬ್ರಾಹಿಂ, ಮತ್ತಿತರರು ಭೇಟಿನೀಡಿ ಪರಿಶೀಲಿಸಿದರು. (ಕುಂದಾಪ್ರ ಡಾಟ್ ಕಾಂ)