ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಿಲ್ಲೆಯಲ್ಲಿ ನಾಲ್ಕು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ ಪಕ್ಷ ತನ್ನ ಹೊಸ ಪ್ರಯೋಗದಲ್ಲಿ ಖಂಡಿತ ಯಶಸ್ಸು ಸಾಧಿಸಲಿದೆ. ಮಾತ್ರವಲ್ಲ ರಾಜ್ಯದಲ್ಲಿಯೂ ಬಿಜೆಪಿ ಪ್ರಚಂಡ ಗೆಲುವು ದೊರೆಯಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮದ್ವರಾಜ್ ಹೇಳಿದರು.
ಅವರು ಮಂಗಳವಾರ ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈ ಮಾತನಾಡಿ ಬೈಂದೂರು ಬಿಜೆಪಿ ಅಭ್ಯರ್ಥಿಯ ಬಗ್ಗೆ ಕಾರ್ಯಕರ್ತರು ಹಾಗೂ ಜನರಲ್ಲಿ ಉತ್ತಮ ಅಭಿಪ್ರಾಯವಿದೆ. ಆರ್.ಎಸ್.ಎಸ್ ಪ್ರಚಾರಕಾಗಿ ಬಂದವರಿಗೆ ತಳಮಟ್ಟದಲ್ಲಿ ಜನರ ನೋವು ನಲಿವುಗಳ ಅರಿವಿದೆ. ಅವರ ಸಂಕಷ್ಟ ನಿವಾರಿಸಲು ಅವರು ಖಂಡಿತವಾಗಿಯೂ ಪಣತೊಡುತ್ತಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯೇ ಸಾಕ್ಷಿ. ಬೈಂದೂರಿನಲ್ಲಿಯೂ ಅಂತಹದ್ದೊಂದು ಅವಕಾಶ ಎದುರಾಗಿದ್ದು, ಬಿಜೆಪಿ ಅಭ್ಯರ್ಥಿಯೇ ಗೆಲುವ ಸಾಧಿಸಲಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ತಾ.ಪಂ ಮಾಜಿ ಉಪಾಧ್ಯಕ್ಷೆ ಮಾಲಿನಿ ಕೆ., ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಶಿರೂರು ಶಕ್ತಿ ಕೇಂದ್ರದ ಅಧ್ಯಕ್ಷ ಜಗ್ನನಾಥ ಮೊಗವೀರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಮಹಿಳಾ ಮೋರ್ಚಾದ ಭಾಗೀರಥಿ ಸುರೇಶ್, ಗೋಪಾಲ ಕಾಂಚನ್, ಶೋಭಾ ಪುತ್ರನ್, ಅನಿತಾ ಆರ್.ಕೆ, ಬೈಂದೂರು ಬಿಜೆಪಿ ಮಾಧ್ಯಮ ಸಂಚಾಲಕ ಗಣೇಶ ಗಾಣಿಗ ಉಪ್ಪುಂದ ಉಪಸ್ಥಿತರಿದ್ದರು.