ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು,ಜು.06: ಕರಾವಳಿಯಲ್ಲಿ ಮಳೆಯ ತೀವ್ರತೆ ಮುಂದುವರಿದ ಪರಿಣಾಮ ತಾಲೂಕಿನ ನದಿಗಳು ತಂಬಿ ಹರಿಯುತ್ತಿದೆ. ಸಮುದ್ರ ಪ್ರಕ್ಷುಬ್ದಗೊಂಡು ಅಬ್ಬರಿಸುತ್ತಿದೆ. ಅಲ್ಲಲ್ಲಿ ತಗ್ಗು ಪ್ರದೇಶ ಜಲಾವೃತ, ಪ್ರವಾಹ ಪರಿಸ್ಥಿತಿ ಸೇರಿದಂತೆ ಮಳೆಹಾನಿ ಸಂಭವಿಸುತ್ತಿದೆ.
ಕರಾವಳಿಯಲ್ಲಿ ಜೂ.05ರಿಂದ ರೆಡ್ ಅಲರ್ಟ್ ಘೋಷಿಸಲಾಗಿದ್ದು, ವಿಪರೀತ ಮಳೆ ಸುರಿಯುತ್ತಲೇ ಇದೆ. ಕುಂದಾಪುರದ ಪಂಚ ನದಿಗಳಾದ ಸೌರ್ಪಣಿಕ, ಖೇಟ, ಚಕ್ರ, ಕುಬ್ಜ, ವಾರಾಹಿ ನದಿಗಳು ತುಂಬಿ ಹರಿಯುತ್ತಿದೆ. ಕೋಡಿ, ಗಂಗೊಳ್ಳಿ, ಮರವಂತೆ, ಶಿರೂರು ಕರಾವಳಿಯ ಕೆಲ ಭಾಗಗಳಲ್ಲಿ ಸಮುದ್ರ ಕೊರೆತವೂ ಉಂಟಾಗಿದೆ. ಕರಾವಳಿಯಿಂದ ಮಲೆನಾಡಿಗೆ ಸಂಪರ್ಕಿಸುವ ರಸ್ತೆಯಲ್ಲಿ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು, ಕೆಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ಕಾಲ್ತೋಡು ಭಾಗದಲ್ಲಿ ಮನೆ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಚರಂಡಿಯಲ್ಲಿ ಸುಗಮವಾಗಿ ನೀರು ಹರಿಯದ ಕಾರಣ ಅಲ್ಲಲ್ಲಿ ಕೃತ ನೆರೆ ಸೃಷ್ಟಿಯಾಗುತ್ತಿದೆ.
ಜಿಲ್ಲೆಯಲ್ಲಿ 196 ಮಿ.ಮಿ ಮಳೆಯಾಗಿದ್ದು, ಉಡುಪಿ ತಾಲೂಕಿನಲ್ಲಿ 325.7 ಮಿ.ಮಿ, ಬ್ರಹ್ಮಾವರದಲ್ಲಿ 206.5 ಮಿ.ಮಿ, ಕಾಪುವಿನಲ್ಲಿ 242.5 ಮಿ.ಮಿ, ಕುಂದಾಪುರದಲ್ಲಿ 170.4 ಮಿ.ಮಿ, ಬೈಂದೂರುಇಲ್ಲಿ 163 ಮಿ.ಮಿ, ಕಾರ್ಕಳದಲ್ಲಿ 196.4 ಮಿ.ಮಿ, ಹೆಬ್ರಿ ತಾಲೂಕಿನಲ್ಲಿ 179.7 ಮಿ.ಮಿ ಮಳೆಯಾಗಿದೆ.
ಒತ್ತಿನಣೆಯಲ್ಲಿ ಗುಡ್ಡ ಕುಸಿತ:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭ ಆದಾಗಲಿಂದಲೂ ಬೈಂದೂರು ಒತ್ತಿನಣೆ ಗುಡ್ಡ ಜರಿಯುತ್ತಲೇ ಇದ್ದು, ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರವೂ ಅಪಾಯಕಾರಿಯಾಗಿದೆ. ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಒತ್ತಿನಣೆ ತಿರುವು ಸಮೀಪ ಗುಡ್ಡ ಜರಿದಿದ್ದು, ಅಪಾಯದ ಮುನ್ಸೂಚನೆ ನೀಡಿದೆ. ಗುರುವಾರ ಬೆಳಿಗ್ಗೆ ವಾಹನಗಳನ್ನು ಏಕಮುಖ ಸಂಚಾರ ವ್ಯವಸ್ಥೆ ಮಾಡಿ, ಜರಿದ ಗುಡ್ಡದ ಮಣ್ಣನ್ನು ಬದಿಗೆ ಸರಿಸುವ ಕಾರ್ಯ ಮಾಡಲಾಯಿತು. ಮೇಲ್ಬಾಗದಲ್ಲಿರುವ ಕಲ್ಲು ಜಾರಿ ರಸ್ತೆಗೆ ಬೀಳುವ ಅಪಾಯ ಇರುವುದರಿಂದ, ಗುಡ್ಡದ ಮೇಲ್ಬಾಗದಲ್ಲಿರುವ ಕಲ್ಲುಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಇನ್ನೂ ಒತ್ತಿನಣೆ ರಾಘವೇಂದ್ರ ಮಠಕ್ಕೆ ಪ್ರವೇಶ ದಾರಿಗೆ ತಾಕಿಕೊಂಡಿರುವ ಸೆಳ್ಳೆಕುಳ್ಳಿ ಕಡೆಗೆ ಹರಿಯುವ ತೊರೆಯ ಪಕ್ಕದಲ್ಲಿಯೂ ಕುಸಿತ ಉಂಟಾಗಿದೆ. ಹೀಗೆ ಕುಸಿತ ಮುಂದುವರಿದರೆ ಹೆದ್ದಾರಿಯೇ ಕುಸಿಯುವ ಭೀತಿ ಇದೆ.