ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ನಡೆದ ದೋಣಿ ದುರಂತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನೋರ್ವ ನಾಪತ್ತೆಯಾದ ಘಟನೆ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಪಟ್ಟೆಬಲೆ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿ ಸಂಜೆ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸಮುದ್ರದಲೆಗಳ ಹೊಡೆತಕ್ಕೆ ದೋಣಿ ಮಗುಚಿ ಬಿದ್ದು ದುರಂತ ನಡೆದಿದ್ದು, ದೋಣಿಯಡಿಗೆ ಸಿಲುಕಿದ್ದ ನಾಗೇಶ್ ಬಾಬು ಖಾರ್ವಿ [30] ಎಂಬುವವರು ಮೃತಪಟ್ಟಿದ್ದಾರೆ. ಸತೀಶ್ ಖಾರ್ವಿ [34] ಎಂಬುವವರು ನಾಪತ್ತೆಯಾಗಿದ್ದು ಹುಡುಕಾಟ ನಡೆಸಲಾಗುತ್ತಿದೆ. ಸಚಿನ್ ಖಾರ್ವಿ ಎಂಬುವವರಿಗೆ ಸೇರಿದ ಮಾಸ್ತಿ ಮರ್ಲಿಚಿಕ್ಕು ಪ್ರಸಾದ ಹೆಸರಿನ ದೋಣಿಯಲ್ಲಿ 8 ಮಂದಿ ಮೀನುಗಾರಿಕೆಗೆ ತೆರಳಿದ್ದು, ದಡಕ್ಕೆ ಸಮೀಪವಿರುವಾಗ ದುರಂತ ನಡೆದಿದೆ. 6 ಮಂದಿ ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಸ್ಪಸ್ಥರಾಗಿದ್ದ ದೋಣಿ ಮಾಲಿಕ ಸಚಿನ್ ಖಾರ್ವಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ.
ಮೀನುಗಾರರು ದುರಂತಕ್ಕೀಡದ ದೋಣಿ, ಬಲೆಯನ್ನು ದಡಕ್ಕೆ ಎಳೆದು ತರಲಾಗಿದೆ. ಬೈಂದೂರು ಠಾಣೆ ಪೊಲೀಸರು, ಗಂಗೊಳ್ಳಿ ಬಂದರು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ದೋಣಿ ನಷ್ಟದ ಅಂದಾಜು ಇನ್ನಷ್ಟೇ ದೊರೆಯಬೇಕಿದೆ.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ಸೇರಿದಂತೆ ಇಲಾಖಾ ಅಧಿಕಾರಿಗಳು, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಮದನ್ ಕುಮಾರ್ ಉಪ್ಪುಂದ, ಆನಂದ ಖಾರ್ವಿ, ವೆಂಕಟರಮಣ ಖಾರ್ವಿ ಸೇರಿದಂತೆ ಮೀನುಗಾರ ಮುಖಂಡರು ಮೊದಲಾದವರು ಸ್ಥಳದಲ್ಲಿದ್ದು ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.
2021ರಲ್ಲಿ ತಾರಾಪತಿಯಲ್ಲಿಯೂ ದೋಣಿ ಅವಘಡ ಸಂಭವಿಸಿ ಇಬ್ಬರು ಮೀನುಗಾರರು ಮೃತಪಟ್ಟಿದ್ದರು. 2020ರಲ್ಲಿ ನಾಲ್ವರು ಮೀನುಗಾರರು ಮೃತಪಟ್ಟಿದ್ದರು. ಕೋಡೇರಿ ಬಂದರಿನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮೀನುಗಾರರು ಸಮಸ್ಯೆ ಎದುರಿಸುತ್ತಿದ್ದು, ಬಂದರಿಗೆ ತೆರಳದೇ ಬೇರೆಡೆ ದೋಣಿ ಲಂಗರು ಹಾಕುತ್ತಿದ್ದಾರೆ. ಇದರಿಂದಾಗಿ ಮೀನುಗಾರರು ಹಾಗೂ ದೋಣಿಗಳಿಗೆ ಸುರಕ್ಷತೆ ಇಲ್ಲದಂತಾಗಿದೆ.