ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ, ಗ್ರಾಪಂ ಕೊಲ್ಲೂರು, ಅರಣ್ಯ ಇಲಾಖೆ ವನ್ಯಜೀವಿ ವಿಭಾಗ, ಸ್ಥಳೀಯ ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಸನ್ಮನಸ್ ಸಮಿತಿ, ಟಿಪ್ ಸೆಷನ್ಸ್ ಎನ್‌ಜಿಓ ಹಾಗೂ ವಿಜಯವಾಣಿ ಆಶ್ರಯದಲ್ಲಿ ಶುಕ್ರವಾರ ಕೊಲ್ಲೂರು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗಾಗಿ ಪ್ಲಾಸ್ಟಿಕ್ ನಿಷೇಧ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ. ಎಂ. ರೆಬೆಲ್ಲೊ ಅವರು ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿ, ನಾವುಗಳು ಬಳಸಿ ಎಸೆಯುವ ಪ್ಲಾಸ್ಟಿಕ್ ಕಪ್ನಲ್ಲಿ ಬಿಸಿ ಪಾನೀಯವನ್ನು ಸೇವಿಸಿದರೆ ನಮ್ಮ ದೇಹದೊಳಗೆ ಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತವೆ. ಖರಗ್ಪುರ್ ಐಐಟಿ ನಡೆಸಿದ ಸಂಶೋಧನೆಯ ಪ್ರಕಾರ ಪ್ರತಿನಿತ್ಯ ಈ ಕಪ್ನಲ್ಲಿ ಬಿಸಿಪಾನೀಯ ಸೇವೆನೆಯಿಂದ ಸುಮಾರು ೭೫ ಸಾವಿರ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹಕ್ಕೆ ಹೋಗುತ್ತವೆ. ಅಲ್ಲದೇ ಪ್ಲಾಸ್ಟಿಕ್ ಬಿಸಿ ಮಾಡಿದರೆ ಅಥವಾ ಸುಟ್ಟರೆ ಕಾರ್ಸಿನೋಜನ್ ಮತ್ತು ವಿನೈಲ್ ಕ್ಲೋರೈಡ್ ಮಾನೋಮರ್ ಉತ್ಪತ್ತಿಯಾಗುತ್ತದೆ. ಇದು ಪಿವಿಸಿಕ್ಕಿಂತ ಹತ್ತು ಪಟ್ಟು ಹೆಚ್ಚು ಅಪಾಯಕಾರಿ. ಮಣ್ಣಿನಲ್ಲಿ ಸೇರಿಕೊಂಡರೆ ಮಣ್ಣಿನ ಫಲವತ್ತತೆ ಕೂಡಾ ಸಾಯುತ್ತದೆ. ಇದೊಂದು ವಿಷಕಾರಿ ಪೆಡಂಭೂತವಾಗಿದ್ದು, ನಮ್ಮ ದೇಹದ ನಿರ್ದಿಷ್ಟ ಅಂಗಗಳ, ದೇಹದ ವ್ಯವಸ್ಥೆ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಇಲ್ಲದೇ ದೇಹದ ಅಂಗ ಮತ್ತು ವ್ಯಸ್ಥೆಯನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ. ಪ್ರಸ್ತುತ ಶೇ.೬೫ ಕಾಯಿಲೆಗಳಿಗೂ ಇದು ಕಾರಣವಾಗಿರುವ ಅಂಶಗಳು ಸಂಶೋಧನೆಯಿಂದ ತಿಳಿದು ಬಂದಿದೆ ಎಂದ ಅವರು, ಪ್ಲಾಸ್ಟಿಕ್ ಬಳಕೆಯಿಂದ ಮೊದಲು ನಾವು ಬದಲಾದರೆ ಈ ಸಮಾಜ ಬದಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಪರಿಸರ ರಕ್ಷಿಸುವ ಮೂಲಕ ನವಭಾರತ ನಿರ್ಮಾಣಕ್ಕೆ ಸಜ್ಜಾಗೋಣ. ಈ ಸುಂದರವಾದ ಪ್ರಕೃತಿ ದೇವರ ಕೊಡುಗೆ. ಅದನ್ನು ಉಳಿಸುವ ಮತ್ತು ರಕ್ಷಿಸುವ ಹೊಣೆ ನಮ್ಮೆಲರದ್ದಾಗಿದೆ ಎಂದರು.
ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಶ್ರೀಕಾಂತ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಪ್ರಸ್ತುತ ಕೊಲ್ಲೂರು ಪರಿಸರ ಸ್ವಲ್ಪ ಮಟ್ಟಿಗೆ ಸ್ವಚ್ಛವಾಗಿದೆ. ಯಾತ್ರಾರ್ಥಿಗಳು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ತೊಟ್ಟಿಗಳಿಗೆ ಹಾಕುತ್ತಿದ್ದಾರೆ. ಸಮಿತಿಯ ಕಾರ್ಯದಿಂದ ಪ್ರೇರಣೆಪಡೆದ ಯುವಜನರು ತಾವಿರುವ ಕಡೆ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಸಮಿತಿ ಇದನ್ನು ಇಷ್ಟಕ್ಕೇ ಕೈಬಿಡದೆ ಕೊಲ್ಲೂರಿನ ಇಕ್ಕಡೆಯ ಐದೈದು ಕಿಲೋಮೀಟರು ವ್ಯಾಪ್ತಿಗೆ ವಿಸ್ತರಿಸಲಿದೆ ಎಂದರು.
ಇಲ್ಲಿನ ಸನ್ಮನಸ್ ಸಂಸ್ಥೆಯವರು ದೇವಸ್ಥಾನದ ಆಡಳಿತಕ್ಕೊಳಪಟ್ಟ ಬಾಲಕ, ಬಾಲಕಿಯರ ವಸತಿಗೃಹಕ್ಕೆ ಆರು ವಿದ್ಯುತ್ ಚಾಲಿತ ಗೀಝರ್ಗಳನ್ನು ಕೊಡುಗೆಯಾಗಿ ನೀಡಿದರು ಹಾಗೂ ಇದೇ ಸಂಸ್ಥೆಯವರು ಒಂದು ವರ್ಷದವರೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡುತ್ತಿರುವ ವಿದ್ಯಾರ್ಥಿ ಮಿತ್ರ ಪತ್ರಿಕೆಗಳನ್ನು ಗ್ರಾಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್ ವಿತರಿಸಿದರು.
ಸನ್ಮನಸ್ ಸಂಸ್ಥೆಯ ಚಂದ್ರಶೇಖರ ಅಡಿಗ, ಗಣೇಶ ಹೆಬ್ಬಾರ್, ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಜಿ. ಬಿ., ಉಪನ್ಯಾಸಕರಾದ ನಾಗರಾಜ ಅಡಿಗ, ರಾಮ ನಾಯ್ಕ್, ಪ್ರೌಢಶಾಲಾ ಶಿಕ್ಷಕರಾದ ದತ್ತಾತ್ರೇಯ, ಸುಕುಮಾರ ಶೆಟ್ಟಿ, ಹುಂಚನಿ ಸಚಿನ್ಕುಮಾರ್ ಶೆಟ್ಟಿ, ಟಿಪ್ ಸೆಷನ್ಸ್ ಮುಖ್ಯಸ್ಥೆ ದಿವ್ಯಾ ಹೆಗ್ಡೆ, ಮೇಲ್ವಿಚಾರಕಿ ವಿಜಯಲಕ್ಷ್ಮೀ, ಸಂಯೋಜಕ ಅನೂಪ್ ಶೆಟ್ಟಿ ಇದ್ದರು. ಅರಣ್ಯಾಧಿಕಾರಿ ರೂಪೇಶ್ ಚೌಹಾಣ್ ವಂದಿಸಿದರು.