ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಶಿರೂರು ಅಳ್ವೆಗದ್ದೆಯಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ಯುವಕರಿಬ್ಬರು ನಾಪತ್ತೆಯಾದ ಘಟನೆ ಭಾನುವಾರ ಸಂಜೆ ನಡೆದಿದೆ. ಶಿರೂರು ತಸ್ಫಿಯಾ ಮಂಜಿಲ್ ನ್ಯೂ ಕಾಲೋನಿ ನಿವಾಸಿ, ಗಂಗೊಳ್ಳಿ ಮುಸ್ತಾಫಾ ಎಂಬುವರ ಮಗ ಗಂಗೊಳ್ಳಿ ಮೊಹಮ್ಮದ್ ಮುಸಾಬ್ (22) ಹಾಗೂ ಕೆಸರಕೋಡಿ ನಿವಾಸಿ ಬಾವು ನೂರುಲ್ ಅಮೀನ್ ಎಂಬುವರ ಪುತ್ರ ಬಾವು ನಝಾನ್ (24) ಸಮುದ್ರದಲ್ಲಿ ನಾಪತ್ತೆಯಾದವರು.
ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಕೊಂಡಿದ್ದ ನಾಲ್ವರು ಯುವಕರು ಎಂದಿನಂತೆ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರ ಪ್ರಕ್ಷುಬ್ದ ಇರುವ ಕಾರಣ ಇಬ್ಬರು ಮೀನುಗಾರರು ಆಯತಪ್ಪಿ ಕಡಲ ಪಾಲಾಗಿದ್ದಾರೆ. ತಕ್ಷಣ ಸ್ಥಳೀಯ ಮೀನುಗಾರರು ನಾಪತ್ತೆಯಾದವರ ಶೋಧಕ್ಕಾಗಿ ಪ್ರಯತ್ನಿಸಿದರು ಕೂಡ ಪತ್ತೆಯಾಗಿಲ್ಲ. ರಾತ್ರಿಯ ತನಕವೂ ಶೋಧ ಕಾರ್ಯ ಮುಂದುವರಿಸಿದ್ದರು. ಯುವಕರು ಬದುಕುಳಿದಿರುವ ಸಾಧ್ಯತೆ ಕಡಿಮೆಯಿದ್ದು, ಮೃತದೇಹ ಪತ್ತೆ ಕಾರ್ಯದಲ್ಲಿ ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮೀನುಗಾರರು ತೊಡಗಿಕೊಂಡಿದ್ದರು.
ಘಟನಾ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ನಿರಂಜನ ಗೌಡ, ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ, ತಹಶೀಲ್ದಾರರು ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡದರು.
ಒಂದು ತಿಂಗಳ ಹಿಂದಷ್ಟೇ ಉಪ್ಪುಂದ ಕರ್ಕಿಕಳಿ ಬಳಿ ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ ಪಟ್ಟೆಬಲೆ ದೋಣಿಯೊಂದು ಮಗುಚಿಬಿದ್ದು ಇಬ್ಬರು ಮೀನುಗಾರರು ಮೃತಪಟ್ಟಿದ್ದರು. ಒಟ್ಟು ಎಂಟು ಮಂದಿ ಮೀನುಗಾರರ ಈ ಪೈಕಿ ಆರು ಮಂದಿ ಈಜಿ ದಡ ಸೇರಿದ್ದರು. ಈ ಘಟನೆ ಮಾಸುವ ಮುನ್ನವೇ ಶಿರೂರಿನಲ್ಲಿ ನಡೆದ ದೋಣಿ ದುರಂತದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.