ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ 32ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಮೋಹನ ಪೂಜಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘ ವರದಿ ವರ್ಷದಲ್ಲಿ ರೂ. 112.74 ಕೋಟಿ ವ್ಯವಹಾರ ನಡೆಸಿ, ರೂ. 40.54 ಲಕ್ಷ ನಿವ್ವಳ ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ಎ ದರ್ಜೆ ಹೊಂದಿದೆ. ಸಂಘವು ಪ್ರಾರಂಭದಿಂದಲೂ ಲಾಭದಲ್ಲಿಯ್ಲೇ ಮುನ್ನಡೆಯುತ್ತಿದ್ದು, ಕಳೆದ 31 ವರ್ಷಗಳಿಂದ ನಿರಂತರ ಡಿವಿಡೆಂಟ್ ನೀಡಿರುವ ಹೆಗ್ಗಳಿಕೆ ಗಳಿಸಿದೆ. ಈ ಭಾರಿ 10% ಡಿವಿಡೆಂಟ್ ಘೋಷಿಸಲಾಗಿದೆ. ಪ್ರಧಾನ ಕಚೇರಿಗೆ ಸುಸಜ್ಜಿತವಾದ ಸಹಕಾರಿ ಸಂಕೀರ್ಣ ನಿರ್ಮಾಣ ಯೋಜನೆಯಿದ್ದು, ಅದಕ್ಕಾಗಿ ಜಾಗ ಮೀಸಲಿರಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರಪತಿ ಪದಕ ಪುರಸ್ಕೃತ ಕ್ರೀಡಾ ಕ್ಷೇತ್ರದ ಸಾಧಕ, ಪೋಲಿಸ್ ಸಿಬ್ಬಂದಿ ಶಂಕರ ಪೂಜಾರಿ ಕಾಡಿನತಾರು, ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಮೂಲ್ಯ, ವೆಯ್ಟ್ ಲಿಫ್ಟಿಂಗ್‌ನಲ್ಲಿ ಸಾಧನೆಗೈದ ಕ್ರೀಡಾ ಸಾಧಕಿ ಸೌಮ್ಯ ಬಿ., ಹಾಗೂ ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಸಾಧನೆಗೈದ 26 ಮಂದಿ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ನಿರ್ದೇಶಕರಾದ ಹೆಚ್. ನರಸಿಂಹ ಪೂಜಾರಿ, ಬಿ. ನಾರಾಯಣ ಪೂಜಾರಿ, ಮಂಜ ಪೂಜಾರಿ, ರಾಜು ಪೂಜಾರಿ, ಸುರೇಶ ಪೂಜಾರಿ, ಸಂತೋಷ, ಶಾರದಾ, ಲಕ್ಷ್ಮೀ ಉಪಸ್ಥಿತರಿದ್ದರು.
ಸಂಘದ ಪ್ರಧಾನ ವ್ಯವಸ್ಥಾಪಕ ಮಹೇಶ್ ಹೆಚ್. ವಾರ್ಷಿಕ ವರದಿ, ಲೆಕ್ಕಪತ್ರ, ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು.