ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.25: ಭಂಡಾರ್ಕಾರ್ಸ್ ಕಾಲೇಜು ನೇತೃತ್ವದಲ್ಲಿ ಕುಂದಾಪುರ ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಅಕ್ಟೋಬರ್ 2ರ , ಕಳೆದ ವರ್ಷದಂತೆ ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಹೇಳಿದರು.
ಅವರು ಕಾಲೇಜಿನ ಎ.ವಿ. ಹಾಲಿನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 60ನೇ ವರ್ಷದ ಸಂಭ್ರಮದಲ್ಲಿರುವ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಸುಮಾರು 3000 ವಿದ್ಯಾರ್ಥಿಗಳಿಗೆ ಈ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡಿದೆ. ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆ ದಿನದಂದು ಬೃಹತ್ ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ ಎಂಬ ಜನ ಜಾಗೃತಿ ಕಾರ್ಯಕ್ರಮವನ್ನು ಕುಂದಾಪುರದ 23 ವಾರ್ಡುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಜನರಲ್ಲಿ ಸ್ವಚ್ಛತೆ ಕುರಿತುಅರಿವು ಮೂಡಿಸಲು ಕುಂದಾಪುರ ಪುರಸಭಾ ವ್ಯಾಪ್ತಿಯ ಸುಮಾರು 15,000ಕ್ಕೂ ಮಿಕ್ಕಿ ಮನೆಗಳನ್ನು ಸಂಪರ್ಕ ಮಾಡಲಾಗುತ್ತದೆ ಎಂದರು.
ಕುಂದಾಪುರ ಪುರಸಭೆ ಪುರ ಸ್ವಚ್ಛತೆ ಕುರಿತು ಉತ್ತಮವಾದ ಸೇವೆ ಸಲ್ಲಿಸುತ್ತಿದ್ದು, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದರೊಂದಿಗೆ ಮುಂದಿನ ಪೀಳಿಗೆಗೂ ಪರಿಸರ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಆಶಯವನ್ನು ಕಾಲೇಜು ಹೊಂದಿದೆ. ಕುಂದಾಪುರದ ಸಹಾಯಕ ಆಯುಕ್ತರು, ಪುರಸಭಾ ಮುಖ್ಯಾಧಿಕಾರಿಗಳು ಹಾಗೂ ಎಲ್ಲಾ ಪುರಸಭಾ ಸದಸ್ಯರು ಈ ಸ್ವಚ್ಛ ಕುಂದಾಪುರ – ನಮ್ಮ ಕುಂದಾಪುರ ಅಭಿಯಾನಕ್ಕೆ ಬೆಂಬಲ ನೀಡಲಿದ್ದಾರೆ. ಈ ಅಭಿಯಾನದಲ್ಲಿ ಎಲ್ಲಾ ಪುರಸಭೆಯ ನಾಗರಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ಗೊಂಡ, ವಿಶ್ವಸ್ಥರಾದ ಯು.ಎಸ್. ಶೆಣೈ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಸತ್ಯನಾರಾಯಣ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಸುರೇಶ್ ಉಪಸ್ಥಿತರಿದ್ದರು.