ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ 14 ಕೋಟಿ ರೂ. ಹೆಚ್ಚು ಅಕ್ರಮ ನಡೆದಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘ ಸಲ್ಲಿಸಿದ್ದ ದೂರನ್ನು ದಾಖಲಿಸಿಕೊಂಡಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಪೊಲೀಸರಿಗೆ ಡಿಸೆಂಬರ್ 12ರೊಗಳಗೆ ವರದಿ ಸಲ್ಲಿಸಲು ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ದ.ಕ ಸಹಕಾರಿ ಸಕ್ಕರೆ ಕಾರ್ಖಾನೆಯ ಎಂಡಿ, ಅಧ್ಯಕ್ಷರು, ಆಡಳಿತ ಮಂಡಳಿ, ಬಿಡ್ಡರ್ ಹಾಗೂ ಸಿಬ್ಬಂದಿಗಳ ವಿರುದ್ಧ ಬ್ರಹ್ಮಾವರ ಪೊಲೀಸರು ಎಂಐಆರ್ ದಾಖಲಿಸಿಕೊಂಡಿದ್ದಾರೆ.
18-08-2021ರಿಂದ 05-12-2022ರ ಮಧ್ಯಾವದಿಯಲ್ಲಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಸ್ಥಾವರ ಮತ್ತು ಯಂತ್ರೋಪಕರಣಗಳ ಮಾರಾಟಕ್ಕೆ ಸಂಬಂಧಿಸಿದಂತೆ ಟೆಂಡರ್ ಕಮ್ ಹರಾಜು ಪ್ರಕ್ರಿಯೆಯಲ್ಲಿ ವಂಚನೆ, ದಾಖಲೆಗಳನ್ನು ರಚಿಸುವಲ್ಲಿ ಹುದ್ದೆಯ ದುರುಪಯೋಗ ಮತ್ತು ವೈಯಕ್ತಿಕ ಲಾಭ ಪಡೆಯುವ ಉದ್ದೇಶದಿಂದ ಪರಸ್ಪರ ಪಿತೂರು ನಡೆಸಿ ಕಾನೂನುಬಾಹಿರ ಟೆಂಡರ್ ಪ್ರಕ್ರಿಯ ಮಾಡುವ ಮೂಲಕ ನಂಬಿಕೆ ದ್ರೋಹ, ದುರುಪಯೋಗ, ವಂಚನೆಯ ಮೂಲಕ ಸುಳ್ಳುದಾಖಲೆಗಳನ್ನು ಸೃಷ್ಟಿಸಿ ಗುಜರಿಯನ್ನು ಮಾರಾಟ ಮಾಡಲಾಗಿದೆ. ಇದು ರೈತರಿಗೆ ಮತ್ತು ಸರಕಾರಕ್ಕೆ 14 ಕೋಟಿಯಷ್ಟು ಭಾರಿ ಆರ್ಥಿಕ ನಷ್ಟವನ್ನುಂಟುಮಾಡಲಾಗಿದೆ ಎಂದು ಎಫ್.ಐ.ಆರ್ ದಾಖಲಾಗಿದೆ.
ದೂರಿನಲ್ಲಿ ಮೊದಲ ಆರೋಪಿಯನ್ನು ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ನಾಯಕ್, ಎರಡನೇ ಆರೋಪಿಯನ್ನಾಗಿ ಎಂ.ಡಿ ಲಕ್ಷ್ಮೀನಾರಾಯಣ್, 3ನೇ ಆರೋಪಿಯಾಗಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, 4ನೇ ಆರೋಪಿಯಾಗಿ ಉಮಾನಾಥ ಶೆಟ್ಟಿ, 5ರಿಂದ 12ನೇ ಆರೋಪಿಗಳಾಗಿ ನಿರ್ದೇಶಕರು ಹಾಗೂ 13 ರಿಮದ 16ನೇ ಆರೋಪಿಗಳಾಗಿ ಟೆಂಡರ್ ಪ್ರಕ್ರಿಯೆಯನ್ನು ಮೌಲ್ಯಮಾಪನ ಮಾಡಲು ರಚಿಸಲಾದ ತಾಂತ್ರಿಕ ಸಮಿತಿ ಸದಸ್ಯರು, 17ನೇ ಆರೋಪಿ ಬಿಡ್ಡರ್ ಹಾಗೂ 18ರಿಂದ 25ನೇ ಆರೋಪಿಗಳು ಸಂಸ್ಥೆಯ ಸಿಬ್ಬಂದಿಗಳಾಗಿದ್ದಾರೆ.