ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಶ್ರೀ ಶಾರದಾ ಮಹೋತ್ಸವದ ೪೧ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜದ ತ್ರಾಸಿ-ಗಂಗೊಳ್ಳಿ ವಲಯದ ಅಧ್ಯಕ್ಷ ಮಂಜುನಾಥ ಸಾಲಿಯಾನ್ ಮಾತನಾಡಿ, ಸೇವಾ ಸಂಘದ ಮುಖಾಂತರ ಗಂಗೊಳ್ಳಿಯಲ್ಲಿ ಎಲ್ಲಾ ಜಾತಿ ಧರ್ಮದವರು ಒಂದಾಗಿ ಶ್ರೀ ಶಾರದೋತ್ಸವವನ್ನು ಆಚರಿಸಿಕೊಂಡು ಬಂದಿರುವುದು ಶ್ಲಾಘನೀಯ. ನಿರಂತರ ೪೧ವರ್ಷ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ಒಂದುಗೂಡಿಸುವ ಸಮಿತಿಯ ಕಾರ್ಯ ಅಭಿನಂದನಾರ್ಹವಾದುದು ಎಂದರು.
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ, ಪುರೋಹಿತರಾದ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ ಮತ್ತು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಶುಭ ಹಾರೈಸಿದರು. ಇದೇ ಸಂದರ್ಭ ದಸರಾ ಹಬ್ಬದ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರರಿಗೆ ಬಹುಮಾನ ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಕಾರ್ಯದರ್ಶಿ ಗೋಪಾಲ ಚಂದನ್, ಮಹಿಳಾ ಮಂಡಳಿಯ ರೇಣುಕಾ ವಾಸುದೇವ ಶೇರುಗಾರ್, ಪ್ರೇಮಾ ಸಿ.ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಸತೀಶ ಜಿ. ಸ್ವಾಗತಿಸಿದರು. ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಉಮಾನಾಥ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೇಖರ ಜಿ. ಮತ್ತು ಅನಿತಾ ಶೇಟ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಶ್ರೀಪತಿ ಗಾಣಿಗ ವಂದಿಸಿದರು.