ಕುಂದಾಪುರ: ಕಲ್ಮಶರಹಿತ ಶುದ್ಧ ಮನಸ್ಸು, ಗುರುಹಿರಿಯರ ಆಶಿರ್ವಾದ ಹಾಗೂ ಸ್ಪಷ್ಟ ಗುರಿಯೊಂದಿಗೆ ಮುನ್ನಡೆದರೇ ಮಾತ್ರ ಬದುಕಿನಲ್ಲಿ ಸಾಧನೆಗೈಯಲು ಸಾಧ್ಯ ಎಂದು ಅಬುದಾಬಿಯ ಖ್ಯಾತ ಉದ್ಯಮಿ ಪದ್ಮಶ್ರೀ ಡಾ| ಬಿ. ಆರ್. ಶೆಟ್ಟಿ ಹೇಳಿದರು
ಅವರು ಇಲ್ಲಿನ ಆರ್. ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ನ ಯಡ್ತರೆ ಮಂಜಯ್ಯ ಶೆಟ್ಟಿ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕಷ್ಟ-ಸುಖ ಎರಡನ್ನೂ ಅರಿತು ಜೀವನದಲ್ಲಿ ಮೇಲೆ ಬಂದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿರುವುದಿಲ್ಲ. ಬದುಕಿನಲ್ಲಿ ಹಣವೇ ಮುಖ್ಯವಲ್ಲ. ನಿಷ್ಠೆಯಿಂದ ಕೆಲಸ ಮಾಡುವುದೂ ಅಷ್ಟೇ ಮುಖ್ಯ. ನೀವು ನಿಷ್ಠೆಯಿಂದಿದ್ದರೇ, ನಿಮ್ಮನ್ನನುಸರಿಸುವವರೂ ನಿಷ್ಠೆಯಿಂದ ಇರುತ್ತಾರೆ ಮತ್ತು ನೀವು ಎತ್ತರಕ್ಕೆ ಬೆಳೆಯುತ್ತೀರಿ ಎಂದವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಎ.ಜಿ. ಕೊಡ್ಗಿ ಮಾತನಾಡಿ ಯಡ್ತರೆ ಮಂಜಯ್ಯ ಶೆಟ್ಟಿಯವರ ವ್ಯಕ್ತಿತ್ವದಲ್ಲಿ ರಾಜಕೀಯ ಕಾಣಲು ಸಾಧ್ಯವಿಲ್ಲ. ಅವರು ಬದುಕಿನುದ್ದಕ್ಕೂ ಯಾರನ್ನೂ ದೂಷಿಸಿದ್ದನ್ನು ಕಂಡಿಲ್ಲ. ನಿಷ್ಠೆ, ಪ್ರಾಮಾಣಿಕತೆ ಎಂಬುದು ಅವರ ಆಡಳಿತದೊಂದಿಗೆ ಬೆರೆತಿತ್ತು ಎಂದರು.
[quote font_size=”15″ bgcolor=”#ffffff” arrow=”yes” align=”right”]ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ಚಲನಚಿತ್ರ ನಿರ್ದೇಶಕ, ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಮಾತನಾಡಿ ಇಂದಿನ ಸ್ಥಿತಿಗತಿಗಳನ್ನು ಗಮನಿಸಿದರೇ ವೈಚಾರಿಕಕ ಸಮಾಜ ನಾಶವಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ಸಮಾಜ ಕಟ್ಟಲು ಒಂದು ನೈತಿಕತೆ, ತತ್ವಾದರ್ಶಗಳು ಇರಬೇಕು. ತಪ್ಪನ್ನು ತಪ್ಪು ಎಂದು ಹೇಳುವ ವಿಚಾರವಾದಿಗಳ ಧ್ವನಿಯನ್ನೇ ಅಡಗಿಸಿ ಬಹುಸಂಖ್ಯಾತರ ನಿರ್ಧಾರವೇ ಸರಿ ಎಂದು ಹೇಳುತ್ತಿರುವುದು ಸಮಾಜದ ಬಹುದೊಡ್ಡ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.[/quote]
ಟ್ರಸ್ಟ್‌ನ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿ.ವಿ. ಕುಲಾಧಿಪತಿ ವಿನಯ ಹೆಗ್ಡೆ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ನಿಟ್ಟೆ ವಿವಿ ಸಹಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ, ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೆರ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮಂಗಳೂರು, ವರ್ಲ್ಡ್ ಬಂಟ್ಸ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಬಿ. ಸಚ್ಚಿದಾನಂದ ಶೆಟ್ಟಿ ಮಂಗಳೂರು, ಕುಂದಾಪುರ ಪುರಸಭಾ ಅಧ್ಯಕ್ಷೆ ಕಲಾವತಿ, ಪ್ರೊ ಎಂ. ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಯು.ಟಿ. ಆಳ್ವ ಮಂಗಳೂರು, ಡಾ. ಎಂ ಲಕ್ಷ್ಮೀನಾರಾಯಣ ಶೆಟ್ಟಿ ಮಂಗಳೂರು, ಯು. ಸೀತಾರಾಮ ಶೆಟ್ಟಿ ಉಪ್ಪುಂದ ಉಪಸ್ಥಿತರಿರುತ್ತಾರೆ.
ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು. ಕುಂದೇಶ್ವರ ದೇವಳದ ಮಾಜಿ ಆಡಳಿತ ಧರ್ಮದರ್ಶಿ ಡಾ. ಎಚ್.ವಿ ನರಸಿಂಹಮೂರ್ತಿ ಪ್ರಸ್ತಾವನೆಗೈದರು. ಪತ್ರಕರ್ತ ಯು.ಎಸ್. ಶೆಣೈ, ಅಧ್ಯಾಪಕ ದಿನಕರ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆವರ್ಸೆ ಸುಧಾಕರ ಶೆಟ್ಟಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಹಾಸ್ಯ ಕಲಾವಿದರ ತಾಳಮದ್ದಳೆ ’ಉತ್ತರ ಕುಮಾರನ ಪೌರುಷ’ ನಡೆಯಿತು. ಸೀತಾರಾಮಕುಮಾರ್ ಕಟೀಲು, ರವೀಂದ್ರ ದೇವಾಡಿಗ, ರಾಮ ಜೋಯಿಷಿ ಬೆಳಾರೆ, ಹಳ್ನಾಡಿ ಜಯರಾಮ ಶೆಟ್ಟಿ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಗಿರೀಶ್ ರೈ ಕಟ್ಟೆಪದವು ಭಾಗವತರಾಗಿ, ಜನಾರ್ಧನ ತೋಳ್ಪಡಿತ್ತಾಯ ಮದ್ದಳೆಗಾರರಾಗಿ, ಸುಬ್ರಹ್ಮಣ್ಯ ಭಟ್, ದೇಲಂತ ಮಜಲು ಚಂಡೆವಾದಕರಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದವರು ತಿಳಿಸಿದ್ದಾರೆ.