ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರಂಭಗೊಂಡ ಪ್ರತಿಭಟನೆ ಮುಂದುವರಿದಿದ್ದು, ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹಾಗೂ ಎಸ್ಪಿ ಡಾ. ಅರುಣ್ ಕೆ. ಅವರು ಭೇಟಿನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ.



ಈ ವೇಳೆ ಜಿಲ್ಲಾಧಿಕಾರಿ ಡಾ ವಿದ್ಯಾಕುಮಾರಿ ಮಾತನಾಡಿ, ವೈದ್ಯಾಧಿಕಾರಿಗಳ ವಿರುದ್ಧದ ಆರೋಪಗಳಿಗೆ ತಜ್ಞ ವೈದ್ಯರ ತಂಡ ರಚಿಸಿ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತಜ್ಞರ ತಂಡ ವರದಿ ಸಲ್ಲಿಸಲು ಒಂದು ವಾರ ಬೇಕಿದ್ದು, ಅಲ್ಲಿಯ ತನಕ ಪ್ರತಿಭಟನೆಯನ್ನು ಕೈಬಿಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿ, ವೈದ್ಯರ ಕರ್ತವ್ಯ ಲೋಪವಿದ್ದರೇ ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಕ್ರಮಗೊಳ್ಳಬೇಕಿದೆ. ಈ ಪ್ರಕರಣವಲ್ಲದೇ ಹಿಂದೆ ಯಾವುದೇ ಇಂತಹ ಘಟನೆ ಆಗಿದ್ದರೂ ಸಂತ್ರಸ್ಥರು ಮನವಿ ಸಲ್ಲಿಸಿ. ಅದರ ಆಧಾರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿದೆ. ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶ್ ರಾಜ್, ಶಂಕರ ಅಂಕದಕಟ್ಟೆ, ರಾಜೇಶ್ ಕಾವೇರಿ, ಜಯಾನಂದ ಖಾರ್ವಿ, ಮೃತ ಮಗುವಿನ ತಂದೆ ಶ್ರೀನಿವಾಸ ಖಾರ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ:
► ಹೆರಿಗೆ ವೇಳೆ ಮಗು ಸಾವು, ವೈದ್ಯರ ನಿರ್ಲಕ್ಷ ಆರೋಪ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ – https://kundapraa.com/?p=70074 .















