ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಿಕ ಕತೆಯನ್ನು ಹೊಂದಿರುವ ʼಕಾಂತಾರʼ ಸಿನಿಮಾ ಚೊಚ್ಚಲ ಆವೃತ್ತಿಯ ʼಸಿಲ್ವರ್ ಪಿಕಾಕ್ ಅವಾರ್ಡ್’ ತನ್ನದಾಗಿಸಿಕೊಂಡಿದೆ. ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ವಿಶೇಷ ಜ್ಯೂರಿ ಅವಾರ್ಡ್ ಲಭಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಪತ್ರವೊಂದನ್ನು ಹಂಚಿಕೊಂಡಿರುವ ರಿಷಬ್ ಶೆಟ್ಟಿ ಈ ಪ್ರಶಸ್ತಿಯನ್ನು ಶಂಕರ್ ನಾಗ್ ಅವರಿಗೆ ಅರ್ಪಿಸಿದ್ದಾರೆ. ʼ54ನೇ ಗೋವಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಸ್ಪೆಷಲ್ ಜ್ಯೂರಿ ಅವಾರ್ಡ್ ಹೊರಕಿದ್ದು ಎಂದೂ ಮರೆಯಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ ಎಂದು ರಿಷಬ್ ಪತ್ರ ಆರಂಭಿಸಿದ್ದಾರೆ.
1979ರಲ್ಲಿ ನನ್ನ ಸ್ಫೂರ್ತಿಯಾದ ಶಂಕರ್ ನಾಗ್ ಸರ್ ಅವರಿಗೆ ʼಒಂದಾನೊಂದು ಕಾಲದಲ್ಲಿʼ ಚಿತ್ರಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿದ್ದು, ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್ ದೊರೆತಿದ್ದು ಅತ್ಯಂತ ಸಂತಸ ನೀಡಿದೆ ಎಂದು ರಿಷಬ್ ಬರೆದಿದ್ದಾರೆ.
ʼಕಾಂತಾರʼವನ್ನು ನೋಡಿ ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡಿಗರು, ಇದೀಗ ʼಕಾಂತಾರ ಅಧ್ಯಾಯ 1ʼಕ್ಕೂ ನೀಡುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತೊಮ್ಮೆ ಉತ್ತಮ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ. ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣವಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಅಭಾರಿ. ಈ ಪ್ರಶಸ್ತಿಯನ್ನು ನಾನು ಶಂಕರ್ ನಾಗ್ ಅವರಿಗೆ ಅರ್ಪಿಸುತ್ತೇನೆʼ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.