ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ರಕ್ತದಾನ ಮಾನವಕುಲಕ್ಕೆ ಸಹಾಯ ಮಾಡುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಿರುವುದರಿಂದ ರಕ್ತದಾನ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ರಕ್ತದಾನವು ಆರೋಗ್ಯ ರಕ್ಷಣೆಯ ಪ್ರಮುಖ ಭಾಗವಾಗಿದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ರಕ್ತದ ಅವಶ್ಯಕತೆ ಇದೆ. ಅಲ್ಲದೇ ರಕ್ತ ವರ್ಗಾವಣೆಯ ಕ್ಷೇತ್ರದಲ್ಲಿ ವಿಜ್ಞಾನವು ಹೆಚ್ಚಿನ ಪ್ರಗತಿ ಸಾಧಿಸಿದ್ದು, ಇದರಿಂದಾಗಿ ಅನೇಕ ಜೀವಗಳನ್ನು ಉಳಿಸಲಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ ಹೇಳಿದರು.
ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಭಾರತೀಯ ರೆಡ್ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ಭಾನುವಾರ ಸಂಘದ ಆವರಣದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ವ್ಯವಸಾಯಕ್ಕೆ ಪೂರಕವಾಗಿ ಸೇವಾ ಮನೋಭಾವನೆಯಿಂದ ರೈತರ ಹಿತಕ್ಕಾಗಿರುವ ಸಹಕಾರಿ ಸಂಸ್ಥೆ ಗ್ರಾಮೀಣ ಭಾಗದ ಜನರಿಗೆ ರಕ್ತದಾನದ ಮಹತ್ವ, ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸುವಂತ ಕಾರ್ಯ ಮಡುತ್ತಿರುವುದು ಶ್ಲಾಘನೀಯ ಎಂದರು.
ಭಾರತೀಯ ರೆಡ್ಕ್ರಾಸ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಂ. ವಿಜಯ್ ಶಾಸ್ತ್ರಿ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ನಕ್ಷತ್ರ ಬೋವಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ಕುಮಾರ್ ಎಸ್. ವಿ., ರೆಡ್ಕ್ರಾಸ್ ಸೊಸೈಟಿ ಸದಸ್ಯ ಸದಾನಂದ ಶೆಟ್ಟಿ, ಜಡ್ಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಎಸ್. ಬೆಳಾರಿ, ಉಪಾಧ್ಯಕ್ಷೆ ಭಾರತಿ ಶೆಟ್ಟಿ ಇದ್ದರು. ಕವಿತಾ ಬಿಜು ಪ್ರಾರ್ಥಿಸಿದರು. ಸಂಘದ ಸಿಇಒ ಪ್ರಭಾಕರ ಪೂಜಾರಿ ಸ್ವಾಗತಿಸಿದರು. ಸಿಬ್ಬಂದಿಗಳಾದ ಮಂಜುನಾಥ ಬಿ. ಎಲ್. ನಿರೂಪಿಸಿ, ಪ್ರವೀಣ್ ವಂದಿಸಿದರು. ಸುಮಾರು ೭೫ ಯೂನಿಟ್ ರಕ್ತ ಸಂಗ್ರಹವಾಯಿತು.