ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಲನಶೀಲ ಸಮಾಜದ ಮುಖ್ಯ ಜೀವಾಳ ಉಪದ್ರವಿತನ. ಲೇಖಕ, ಚಿತ್ರಕಾರ ಎಲ್ಲಿಯವರೆಗೆ ಉಪ್ರದವಿಯಾಗಿರುತ್ತಾನೋ ಅಲ್ಲಿಯವರೆಗೆ ಸಮಾಜ ಚೆನ್ನಾಗಿರುತ್ತೆ. ನಿರುಪದ್ರವಿಯಾಗಿ, ವ್ಯವಸ್ಥೆ ಜತೆ ರಾಜಿ ಮಾಡಿಕೊಂಡಾಗ ಸಮಾಜ ಅಸ್ತವ್ಯಸ್ತವಾಗಿರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ, ಕವಿ, ಲೇಖಕ ಡಾ. ಕುಂ. ವೀರಭದ್ರಪ್ಪ (ಕುಂವೀ) ಹೇಳಿದರು.
ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ಬಳಗ ನೇತೃತ್ವದಲ್ಲಿ 4 ದಿನಗಳ ಕಾಲ ಆಯೋಜನೆಗೊಂಡ 10ನೇ ವರ್ಷದ ಕಾರ್ಟೂನ್ ಹಬ್ಬವನ್ನು ಅವರು ಉದ್ಘಾಟಿಸಿ, ಮಾತನಾಡಿ, ಮನಸ್ಸನ್ನು ಕಲಕುವಂತಹ, ಹೊಸ – ಹೊಸ ಆಲೋಚನಾ ಕ್ರಮಗಳನ್ನು ಸೃಷ್ಟಿಸುವ, ಚಿಂತನಾ ಕ್ರಮಗಳನ್ನು ಬದಲಿಸುವ ಶಕ್ತಿ ವ್ಯಂಗ್ಯಚಿತ್ರಗಳಿಗಿದೆ. ಮಕ್ಕಳಲ್ಲಿ ಇಂತಹ ಕಲೆಯನ್ನು ಬೆಳೆಸಬೇಕು. ಪ್ರತಿ ಶಾಲೆಗಳಲ್ಲಿ ಚಿತ್ರಕಲಾ, ಸಂಗೀತ, ನಾಟಕ ಶಿಕ್ಷಕರಿರಬೇಕು. ಆಟದ ಮೈದಾನ ಇರಬೇಕು. ಆಗ ಮಕ್ಕಳಲ್ಲಿ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ಸಾಧ್ಯ. ಆ ಕೆಲಸವನ್ನು ಸರಕಾರ ಮಾಡಬೇಕು. ಇಲ್ಲದಿದ್ದರೆ ಭಾರತೀಯ ರೂಪಾಯಿ ಎಣಿಸುವ ಬದಲು, ಡಾಲರ್, ಪೌಂಡ್ಗಳನ್ನು ಎಣಿಸುವ ಪ್ರವೃತ್ತಿ ಹೆಚ್ಚಾಗುತ್ತದೆ ಎಂದರು.
ಇಷ್ಟೊಂದು ಜನ ವ್ಯಂಗ್ಯಚಿತ್ರಕಾರರನ್ನು ಒಟ್ಟಿಗೆ ನೋಡುವುದೇ ನನ್ನ ಜೀವನದ ಮಧುರ ಕ್ಷಣ ಎಂದ ಅವರು, ಕಾರಂತರು, ವೈದೇಹಿಯಂತಹ ಅನೇಕ ಪ್ರತಿಭಾವಂತರನ್ನು ಕೊಟ್ಟಂತಹ ಊರು ಕುಂದಾಪುರ. ಅನೇಕ ಮಂದಿ ವ್ಯಂಗ್ಯಚಿತ್ರಕಾರರಿದ್ದಾರೆ. ಇಲ್ಲಿ ಕಾರ್ಟೂನು ಹಬ್ಬ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಇನ್ನೊಬ್ಬರ ಅಭಿಪ್ರಾಯಕ್ಕೆ ಗೌರವ ಕೊಟ್ಟಾಗ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯ. ಅಭಿಪ್ರಾಯ ಮೂಡಿಸಲು ಅವಕಾಶವೇ ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವ ಅಲ್ಲ.. ಇದರಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ಆದರೆ ನಿಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವ ಪ್ರಯತ್ನ ಸರಿಯಲ್ಲ. ತಪ್ಪು ಪ್ರಧಾನಿ, ಮುಖ್ಯಮಂತ್ರಿಗಳು ಯಾರೇ ಮಾಡಲಿ. ಅದನ್ನು ಚಿತ್ರದ ಮೂಲಕ ತೋರಿಸಲು ಹಿಂಜರಿಯಬಾರದು. ಪತ್ರಿಕೆಯಲ್ಲೂ ಸಹ ವಾಸ್ತವಾಂಶ ಬರಬೇಕು ಎಂದು ಹೇಳಿದರು.
ಡಿವೈಎಫ್ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಪತ್ರಕರ್ತರಾದ ನವೀನ್ ಸೂರಿಂಜೆ, ಪ್ರಜ್ವಲ್ ಭಟ್ ಮಾತನಾಡಿದರು. ಶಶಿಧರ ಚೌಟ, ಸಂಘಟಕ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಇತ್ತೀಚಿಗೆ ನಿಧನರಾದ ಪತ್ರಕರ್ತ, ಸಾಹಿತಿ ಸಂಘಟಕ ಡಾ. ಶೇಖರ್ ಅಜೆಕಾರು ಅವರಿಗೆ ಗೌರವ ಸಲ್ಲಿಸಲು ಶೇಖರ್ ನಮನ ಚಿತ್ರನಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಂಡಾರ್ಕಾರ್ಸ್ ಕಾಲೇಜಿನ 1991ರ ಬ್ಯಾಚಿನ ಬಿಕಾಂ ಸಹಪಾಠಿಗಳು ಕುಂದಪ್ರಭ ಪತ್ರಿಕೆ ಹಾಗೂ ಕುಂದಾಪ್ರ ಡಾಟ್ ಕಾಂ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಹಲವರು ನುಡಿ ನಮನ ಸಲ್ಲಿಸಿದರು.
ಶಿಕ್ಷಕ ಉದಯ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು.