ಬೈಂದೂರು ಚಂದ್ರಶೇಖರ ನಾವಡ | ಕುಂದಾಪ್ರ ಡಾಟ್ ಕಾಂ
ಕುಂದಾಪ್ರ ಕನ್ನಡ ಎನ್ನುವ ಕನ್ನಡದ ಭಾಷಾ ಪ್ರಾಕಾರವೊಂದು ಸಿನಿಮಾಗಳಲ್ಲಿ ಹೆಚ್ಚಾಗಿ ಹಾಸ್ಯಕ್ಕಷ್ಟೇ ಸೀಮಿತವಾದ ಕಾಲವೊಂದಿತ್ತು. ಸದ್ಯ ಅಂತಹ ಸನ್ನಿವೇಶಗಳಿಲ್ಲ. ಕುಂದಾಪ್ರ ಕನ್ನಡದಲ್ಲಿಯೂ ಹಲವು ಸಿನಿಮಾ ಕಿರುಚಿತ್ರಗಳು ನಿರ್ಮಾಣಗೊಂಡಿದೆ. ಕಾಂತಾರದ ಯಶಸ್ಸಿನ ನಂತರ ಇದೀಗ ಸತೀಶ್ ಎಂ ಬೈಂದೂರು ಅವರ ಲಕ್ಷ್ಮೀ ಪ್ರೊಡಕ್ಷನ್ ಬ್ಯಾನರ್ ಅಡಿ ರಾಘವೇಂದ್ರ ಶಿರಿಯಾರ ನಿರ್ದೇಶನದಲ್ಲಿ ಕುಂದಗನ್ನಡದ ಗ್ರಾಮೀಣ ಸೊಗಡಿನ ’ವಸಂತಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಸಿನಿಮಾದ ಶೂಟಿಂಗಿಗೆ ಆಯ್ಕೆ ಮಾಡಿಕೊಂಡ ಸಹ್ಯಾದ್ರಿಯ ತಪ್ಪಲಿನ ಹಾಲಾಡಿ ಪರಿಸರ ನೈಸರ್ಗಿಕ ಸೌಂದರ್ಯದ ಖನಿ. ಇಲ್ಲಿನ ನೆಲ-ಜಲ, ನದಿ, ಕಾಡು, ಗುಡ್ಡ-ಬೆಟ್ಟ, ಗದ್ದೆ, ತೋಟದ ನಡುವೆಯ ಸುಂದರ ಚಿತ್ರಣ ’ವಸಂತಿ’ಯ ಮೂಲಕ ಸಮಸ್ತ ಕನ್ನಡಿಗರಿಗೆ ಪರದೆಯ ಮೇಲೆ ನೋಡಿ ಆನಂದಿಸುವ ಅವಕಾಶ ದೊರೆತಂತಾಗಿದೆ. ಕರಾವಳಿಯ ಭೂತಾರಾಧನೆ, ನಾಗಾರಾಧನೆ, ಕುಂದಾಪ್ರ ಕನ್ನಡದ ಕಂಪು-ತಂಪು ಇಂಪಾಗಿ ಪ್ರೇಕ್ಷಕನ ಹೃದಯ ತಟ್ಟುತ್ತದೆ.
ಸ್ಥಳೀಯ ರಂಗ ಕಲಾವಿದರೇ ಅಭಿನಯಿಸಿರುವ ಸಿನಿಮಾದ ನಾಯಕಿ ವಸಂತಿ ಓರ್ವ ಗೇರು ಬೀಜ ಕಾರ್ಖಾನೆಯ ಕಾರ್ಮಿಕೆ. ವಸಂತಿಯ (ಭೂಮಿ ಶೆಟ್ಟಿ) ಬದುಕಿನ ಸುತ್ತ ಹೆಣೆದ ಕಥಾ ಹಂದರ ಹೊಂದಿದೆ. ಮದ್ಯ ವ್ಯಸನಿ ತಂದೆ, ಅನಾರೋಗ್ಯ ಪೀಡಿತ ತಾಯಿಯ ಅಸಹಾಯಕತೆಯ ಕಾರಣದಿಂದ ಸಂಸಾರದ ಎಲ್ಲಾ ಜವಾಬ್ದಾರಿಯನ್ನು ಹೊತ್ತ ವಸಂತಿ ಬೆಂಕಿಯಲ್ಲಿ ಅರಳಿದ ಕಮಲದಂತೆ ತನ್ನನ್ನು ಪ್ರೀತಿಸುವ ಯುವಕನನ್ನೂ ತಿರಸ್ಕರಿಸಿ ತ್ಯಾಗಮೂರ್ತಿಯಾಗುತ್ತಾಳೆ. ತನ್ನೆಲ್ಲಾ ಸುಖ-ಸಂತೋಷವನ್ನು ಅಮ್ಮ-ಅಜ್ಜ-ತಮ್ಮನ ಆಸರೆಯಾಗಲು ತ್ಯಾಗ ಮಾಡುವ ಮನೋಜ್ಙ ನಟನೆಯ ಮೂಲಕ ಕುಂದನಾಡಿನ ಸ್ತ್ರೀಯ ಸಾಂಸಾರಿಕ ಬದುಕಿನ ಸತ್ಯಕ್ಕೆ ಬೆಳಕು ಹಿಡಿಯುವ ಸಂಕೇತವಾಗಿ ಕಾಣುತ್ತಾಳೆ. ಸಹಜ ಗಾಂಭೀರ್ಯ, ನಡೆ ನುಡಿಯಲ್ಲಿನ ಲಾಲಿತ್ಯ ಹಾಗೂ ಪರಿಪಕ್ವ ಅಭಿನಯ ಆಪ್ತವೆನಿಸುವಂತಹದ್ದು.
ನಾಯಕ ತೇಜಸ್ ಪರಿಪಕ್ವ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ಅಜ್ಜನ ಪಾತ್ರದಲ್ಲಿ ಪ್ರಭಾಕರ್ ಕುಂದರ್ ಅವರ ಸಶಕ್ತ ನಟನೆ ಪ್ರೇಕ್ಷಕರನ್ನು ಹಿಡಿದಿರಿಸುತ್ತದೆ. ಕುಂದಗನ್ನಡ ಅಭಿವೃದ್ಧಿಗಾಗಿ ಅಕಾಡೆಮಿ ಸ್ಥಾಪನೆಯಾಗಲಿ ಎನ್ನುವ ಭಾಷಾಭಿಮಾನಿಗಳ ಕೂಗಿಗೆ ಇಂತಹ ಸಿನಿಮಾಗಳು ಇನ್ನಷ್ಟು ಶಕ್ತಿ ಕೊಡುವುದರಲ್ಲಿ ಸಂದೇಹವಿಲ್ಲ.
ಸಿನಿಮಾ ಯಶಸ್ವಿ ಒಂದು ವಾರ ಪೂರ್ಣಗೊಳಿಸಿ 2ನೇ ವಾರಕ್ಕೆ ಮುಂದಡಿ ಇರಿಸಿದೆ, ಗ್ರಾಮೀಣ ಸೊಗಡಿನ ಚಿತ್ರವನ್ನುಕುಂದನಾಡಿನ ಜನತೆ ಮೆಚ್ಚಿಕೊಂಡಿದ್ದಾರೆ.















