ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡ ಸಾಹಿತ್ಯವು ದೊಡ್ಡ ಕುಟುಂಬದಿಂದ ಬೆರಳ ತುದಿ ಹಿಡಿದು ಕಿರಿಯರನ್ನು ಕರೆತಂದ, ಎಲ್ಲರೊಳಗೊಂದು ಸಾಕ್ಷಿಪ್ರಜ್ಞೆಯನ್ನು ಮೂಡಿಸಿದೆ. ನಮ್ಮ ನಡೆ, ನುಡಿ, ನೆಲ, ಜಲದ ಬಗ್ಗೆ ನಾವು ಮೈಮರೆತರೆ ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಮರೆವನ್ನು ಇನ್ನಷ್ಟು ಹೆಚ್ಚಿಸುವ ಅಪಾಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೈಂದೂರು ತಾಲೂಕು ಘಟಕ ವತಿಯಿಂದ ಹಿರಿಯರಡೆಗೆ ನಮ್ಮ ನಡಿಗೆ 137ನೇ ಕಾರ್ಯಕ್ರಮದಲ್ಲಿ ಬೈಂದೂರು ಲಾವಣ್ಯದ ಹಿರಿಯ ರಂಗಕರ್ಮಿ, ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗಸಾಧಕ ಪ್ರಶಸ್ತಿ ಪುರಸ್ಕೃತ ಬಿ. ಗಣೇಶ್ ಕಾರಂತ್ ಇವರನ್ನು ಸನ್ಮಾನಿಸಿ ಮಾತನಾಡಿದರು. ತಂತ್ರಜ್ಞಾನ ಪುಸ್ತಕ ಓದನ್ನು ದೂರ ಮಾಡಿದೆ. ಹಣದ ಪ್ರಾಧಾನ್ಯತೆ ಇಂಗ್ಲಿಷ್ ಭಾಷೆಯನ್ನು ಅನಿವಾರ್ಯಗೊಳಿಸಿದೆ. ಪುಸ್ತಕ ಪ್ರೇಮ ವ್ಯರ್ಥ ಕಾಲಹರಣಕ್ಕೆ, ಕೆಟ್ಟ ಹವ್ಯಾಸಕ್ಕೆ ಕಡಿವಾಣ ಹಾಕುತ್ತದೆ. ಶ್ರೇಷ್ಠ ಕೃತಿಗಳ ಓದು ಸಹನೆ, ಸಹಬಾಳ್ವೆಯಂತಹ ಬಾಳಿನ ಮೌಲ್ಯವನ್ನು ತಿಳಿಸಿಕೊಡುತ್ತದೆ. ಸಂವೇದನಾಶೀಲರನ್ನಾಗಿ, ಜೀವಮುಖಿಗಳಾಗಿ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿರಿಯ ರಂಗಕರ್ಮಿ ಬಿ. ಗಣೇಶ್ ಕಾರಂತ್ ಮಾತನಾಡಿ, ಮನೆಯ ಸುತ್ತಲಿನ ಸಾಂಸ್ಕೃತಿಕ ವಾತಾವರಣ, ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆ, ಉತ್ಸವಗಳು, ಸ್ಥಳೀಯ ಗೆಳೆಯರ ರಂಗ ಚಟುವಟಿಕೆಗಳು ನನ್ನನ್ನು ಬಣ್ಣಹಚ್ಚಲು ಪ್ರೇರೇಪಿಸಿದ್ದು, ನಮ್ಮ ಪ್ರತಿಭೆಯನ್ನ ಜನರು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರಿಂದ ರಾಜ್ಯಮಟ್ಟದ ಹಲವಾರು ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ನನ್ನ ಅನುಭವದಿಂದ ಪಡೆದ ರಂಗ ಕೌಶಲ್ಯವನ್ನು ಹಲವಾರು ಶಾಲೆಗಳ ವಿದ್ಯಾರ್ಥಿಗಳಿಗೆ ನಾಟಕಗಳನ್ನು ಆಡಿಸುವ ಮೂಲಕ ರಂಗತರಬೇತಿ ನೀಡುತ್ತಾ ರಂಗಭೂಮಿ ಬೆಳೆಸುವಲ್ಲಿ, ಉಳಿಸುವಲ್ಲಿ ಪ್ರಯತ್ನಿಸುತ್ತಿದ್ದೇನೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧಿಕಾರಿ ಮನೋಹರ್ ಪಿ., ಜಿಲ್ಲಾ ಪ್ರತಿನಿಧಿ ಸತ್ಯನಾ ಕೊಡೇರಿ ಇದ್ದರು. ಕಸಾಪ ಬೈಂದೂರು ತಾಲೂಕು ಘಟಕ ಅಧ್ಯಕ್ಷ ಡಾ. ರಘು ನಾಯ್ಕ ಸ್ವಾಗತಿಸಿದರು. ಖಜಾಂಚಿ ಚಂದ್ರಶೇಖರ ನಾವಡ ಪ್ರಾಸ್ತಾವಿಸಿ, ಸನ್ಮಾನಿತರನ್ನ ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ್ ಪಿ. ನಿರೂಪಿಸಿದರು. ಕೆ. ಪುಂಡಲೀಕ ನಾಯಕ್ ನಾಯ್ಕನಕಟ್ಟೆ ವಂದಿಸಿದರು.