ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಅರಾಟೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಕೆನರಾ ಬ್ಯಾಂಕ್ ಮರವಂತೆ ಶಾಖಾ ಪ್ರಬಂಧಕ, ಮುಂಬಯಿ ಮೂಲದ ರಾಹುಲ್ ಬಾಲಕೃಷ್ಣ ರಂಖಬ್ಮೆ ಮೃತ ದುರ್ದೈವಿ.
ಬೈಂದೂರು ಕಡೆಯಿಂದ ಕುಂದಾಪುರ ಕಡೆಯಿಂದ ಚಲಿಸುತ್ತಿದ್ದ ಲಾರಿ ಅರಾಟೆ ಬಳಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಮ್ಯಾನೇಜರ್ ರಾಹುಲ್ ಕುಂದಾಪುರದಲ್ಲಿ ವಾಸವಿದ್ದು, ಕೆಲಸ ಮುಗಿಸಿ ಮನೆಗೆ ತೆರಳುವ ಸಂದರ್ಭ ಈ ಅಪಘಾತ ಸಂಭವಿಸಿದೆ. ವರ್ಷದ ಹಿಂದಷ್ಟೇ ಅವರು ಮದುವೆಯಾಗಿದ್ದರು. ಬ್ಯಾಂಕಿನಲ್ಲಿಯೂ ಗ್ರಾಹಕರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು.
ಅಪಘಾತದ ಬಳಿಕ ಲಾರಿ ಸಹಿತ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ. ಲಾರಿಯನ್ನು ಹೆಮ್ಮಾಡಿ ಪೇಟೆಯೊಳಗೆ ನುಗ್ಗಿಸಿ ಪುನಃ ಬೈಂದೂರು ಕಡೆಗೆ ತೆರಳಿದ್ದು, ಮುಳ್ಳಿಕಟ್ಟೆ ಡಿವೈಡರ್ ಒಳಗೆ ರಾಂಗ್ ಸೈಡ್‍ನಲ್ಲಿ ತನ್ನ ಗಾಡಿಯನ್ನು ನುಗ್ಗಿಸಿ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿ ಚರಂಡಿಯೊಳಗೆ ಸಿಲುಕೊಂಡಿತ್ತು. ಕ್ರೈನ್ ಮೂಲಕ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ರಾಹಿಂ ಗಂಗೊಳ್ಳಿ ಅವರು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆ ಸಾಗಿಸಲು ಸಹಕರಿಸಿದರು. ಸ್ಥಳೀಯರು ಲಾರಿಯನ್ನು ಬೆನ್ನಟ್ಟಿದ್ದರು. ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಮತ್ತು ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು.