ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಕಾರಾತ್ಮಕ ಅಂಶಗಳೇ ಕೇಳಿಬರುತ್ತಿದ್ದ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಮೂಲಕ ಸುವರ್ಣ ಯಾತ್ರೆಯಲ್ಲಿ ಆರಂಭವಾಗಿದೆ. ಇಂದು ಜಗತ್ತು ಭಾರತವನ್ನು ನೋಡುತ್ತಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಜರುಗಿದ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ನೂತನ ಮಂಡಲ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನರೇಂದ್ರ ಮೋದಿಯವರ ಸಂಕಲ್ಪ, ತಪಸ್ಸು ಮುಂದೆ ದೇಶಕ್ಕೆ ಮತ್ತಷ್ಟು ಒಳ್ಳೆಯದನ್ನೇ ಮಾಡಲಿದೆ. ಅವರು ದೇಶಕ್ಕಾಗಿ ಕಂಡ ಕನಸು ನನಸಾಗಬೇಕಿದ್ದರೆ ಪ್ರತಿ ಕಾರ್ಯಕರ್ತನೂ ನಿಷ್ಠೆಯಿಂದ ತೊಡಗಿಸಿಕೊಂಡ ಈ ಚುನಾವಣೆಯಲ್ಲಿ ಗೆದ್ದುಬರಬೇಕಾಗಿದೆ ಎಂದರು.
ಭಾರತ ಮಾತೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಲಾಯಿತು. ಈ ವೇಳೆ ಮಂಡಲದ ನೂತನ ಅಧ್ಯಕ್ಷರಿಗೆ ಪಕ್ಷದ ಧ್ವಜ ಹಸ್ತಾಂತರಿಸಲಾಯಿತು. ಪದಾಧಿಕಾರಿಗಳನ್ನು ಶಾಲು ಹಾಕಿ ಅಭಿನಂದಿಸಲಾಯಿತು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಎಲ್ಲಾ ಚುನಾವಣೆಯನ್ನೂ ಗಂಭೀರವಾಗಿ ತೆಗೆದುಕೊಳ್ಳುವ ನಾವು ಭಾರತ ದೇಶದ ಭವಿಷ್ಯವನ್ನು ಬರೆಯುವ ಚುನಾವಣೆಯನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬಲಿಷ್ಠ ನಾಯಕನಿಗೆ ಬಲ ತುಂಬಬೇಕಾದ ಚುನಾವಣೆ ಇದಾಗಿದೆ ಎಂದರು.
ಒಂದು ಕಾಲದಲ್ಲಿ ಚೀನಾದ ಗುಂಡಿನ ದಾಳಿಯನ್ನು ಎದುರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಇಂದು ವಿಶ್ವದಲ್ಲಿ ಚೀನಾವನ್ನು ಎದುರಿಸುವ ತಾಕತ್ತು ಇದ್ದರೆ ಅದು ಭಾರತಕ್ಕೆ ಮಾತ್ರ. ರಾಮ ಎಂಬುದು ಕಾಲ್ಪನಿಕ ಎಂದ, ರಾಮಮಂದಿರ ನಿರ್ಮಾಣಕ್ಕೆ ವಿರೋಧವಿದೆ ಎಂದಿದ್ದ ಕಾಂಗ್ರೆಸ್ ಪಕ್ಷ ಇಂದು ಜೈ ಸೀತಾರಾಮ ಎನ್ನುತ್ತಿದ್ದಾರೆ. ಅವರ ಬಾಯಲ್ಲಿ ದೇವರನ್ನು ಸ್ಮರಿಸುವಂತೆ ಮಾಡಿದ್ದು ನರೇಂದ್ರ ಮೋದಿ ತಾಕತ್ತು ಎಂದರು.
ಧಾರ್ಮಿಕ ದತ್ತಿ ಮಂತ್ರಿಯಾಗಿದ್ದಾಗ ಉಡುಪಿ ಜಿಲ್ಲೆಯಲ್ಲಿ ಒಂದು ಸಾವಿರ ದೇವಸ್ಥಾನಕ್ಕೆ ಅನುದಾನ ನೀಡಿದ್ದೆ. ಮೀನುಗಾರಿಕಾ ಮಂತ್ರಿಯಾಗಿದ್ದಾಗ 50 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಜಮಾಡಿ ಕಿರುಬಂದರು ಅಭಿವೃದ್ಧಿ, 185 ಕೋಟಿಗೂ ಹೆಚ್ಚನ ಅನುದಾನ ತಂದಿದ್ದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹತ್ತಾರು ಜನಪರ ಕಾರ್ಯಗಳನ್ನು ಮಾಡಿದ್ದೇನೆ. ಕೋಟ ಏನು ಮಾಡಿದ್ದಾರೆ ಎಂಬುವವರಿಗೆ ಬಿಜೆಪಿ ಕಾರ್ಯಕರ್ತರು ಈ ಉತ್ತರವನ್ನು ನೀಡಬೇಕಿದೆ ಎಂದರು.
ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿಲ್ಲಾಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಕುಂದಾಪುರ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮುಖಂಡರುಗಳಾದ ಉದಯ ಕುಮಾರ್ ಶೆಟ್ಟಿ, ರೂಪಾಲಿ ನಾಯ್ಕ್, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ನಯನಾ ಗಣೇಶ್, ಶಂಕರ ಅಂಕದಕಟ್ಟೆ, ರಾಜೇಶ್ ಕಾವೇರಿ, ವಿಠಲ ಪೂಜಾರಿ, ಕುಮಾರದಾಸ್ ಹಾಲಾಡಿ, ಕಾಡೂರು ಸುರೇಶ್ ಶೆಟ್ಟಿ, ಸುರೇಂದ್ರ ಕಾಂಚನ್, ಜಯಶೀಲ್ ಶೆಟ್ಟಿ, ಪ್ರವೀಣ್, ಕಿರಣ್ ಪೂಜಾರಿ, ಮಂಜುನಾಥ ಬಳ್ಕೂರು, ಅನಿತಾ ಶ್ರೀಧರ್, ಸಂಧ್ಯಾ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ನಿಕಟಪೂರ್ವ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಡಲ ಕಾರ್ಯದರ್ಶಿ ಸುಧೀರ್ ಕೆ.ಎಸ್ ಸ್ವಾಗತಿಸಿ, ಕುಂದಾಪುರ ಮಂಡಲ ಕಾರ್ಯದರ್ಶಿ ಸತೀಶ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.