ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನೆ, ಮಠ, ದೇಗುಲ, ಆಚಾರ-ವಿಚಾರ, ಸಂಬಂಧ ಎಂಬಿತ್ಯಾದಿಗಳು ಬೇರೆ ಯಾವುದೇ ರಾಷ್ಟ್ರಗಳಲ್ಲಿಲ್ಲ. ಇನ್ನೊಬ್ಬರಿಗಾಗಿ ಬದುಕುವ ಪರೋಪಕಾರದ ಜೀವನ ನಮ್ಮ ಸಂಸ್ಕಾರ. ಪ್ರತಿಯೊಂದರಲ್ಲಿಯೂ ತಾಯ್ತನ ಕಾಣುವುದು ನಮ್ಮ ದೇಶದ ವಿಶೇಷತೆಯಾಗಿದೆ ಎಂದು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮನಾಭ ಮೆರ್ಟ ಹೇಳಿದರು.
ಗುಡೇ ಮಹಾಲಿಂಗೇಶ್ವರ ಗೆಳೆಯರ ಬಳಗದ ದಶಮ ಸಂಭ್ರಮ ಸಮ್ಮಿಲನ-2024 ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯೊಬ್ಬರ ಪ್ರತಿಭೆ, ಸಾಮರ್ಥ್ಯ ತೋರ್ಪಡಿಸಲು ವೇದಿಕೆ ಅಗತ್ಯವಾಗಿದ್ದು. ಸಂಘ ಸಂಸ್ಥೆಗಳ ಮೂಲಕ ಈ ವೇದಿಕೆ ಲಭ್ಯವಾಗುತ್ತದೆ. ಗೆಳೆಯರ ಬಳಗವು ಹಲವು ಮಂದಿಯ ಸಾಧನೆಗೆ ವೇದಿಕೆ ಕಲ್ಪಿಸಿದ ಹೆಗ್ಗಳಿಕೆ ಹೊಂದಿದೆ. ಯುವಕರು ದೇಶದ ಅಮೂಲ್ಯ ಸಂಪತ್ತು, ಸುಸಂಸ್ಕೃತ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಯುವ ಜನತೆ ಮನಸು ಮಾಡಬೇಕು. ಸ್ವ-ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿ ಕಡೆಗೆ ಸದಾ ಚಿಂತನಾಶೀಲರಾಗಬೇಕು ಎಂದರು.
ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಚ್. ಜಯಶೀಲ ಎನ್. ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಜೀವರಕ್ಷಕ ಈಶ್ವರ ಮಲ್ಪೆ ಇವರಿಗೆ ‘ಶಿವಶ್ರೀ’ ಪ್ರಶಸ್ತಿ ಪ್ರಧಾನಿಸಲಾಯಿತು. ಅರ್ಹ ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಉದ್ಯಮಿಗಳಾದ ಎಚ್. ವಿಜಯ್ ಶೆಟ್ಟಿ, ವಾಜುರಾಜ ಶೆಟ್ಟಿ, ಕಿರಣ್ ಶೆಟ್ಟಿ, ಪ್ರಗತಿಪರ ಕೃಷಿಕ ಗೋವಿಂದ ಗಾಣಿಗ, ನಾಗರಾಜ ಮೆರ್ಟ, ಭಜನಾ ಮಂಡಳಿ ಅಧ್ಯಕ್ಷ ಶ್ರೀನಾಥ ಮೆರ್ಟ, ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಮಹೇಂದ್ರ ಪೂಜಾರಿ ಇದ್ದರು. ಶಿಕ್ಷಕ ಶ್ರೀಧರ ಗಾಣಿಗ ಸ್ವಾಗತಿಸಿ, ಸುರೇಶ ಮೆಟ್ಟಿನಹೊಳೆ ಪ್ರಾಸ್ತಾವಿಸಿದರು. ಮಂಜುನಾಥ ಹಿಲಿಯಾಣ ನಿರೂಪಿಸಿದರು.
ಸಾಂಸ್ಕೃತಿಕ ಸಮ್ಮಿಲನದ ಪ್ರಯುಕ್ತ ಸಾಸ್ತಾನದ ಡ್ಯಾನ್ಸ್ ಸ್ಟಡಿಯೋ ತಂಡದವರಿಂದ ಸನಾತನ ವೈಭವ ಪ್ರಸ್ತುತಿಯ ನಾಟ್ಯವೈಭವ ಹಾಗೂ ಇನಿ ದನಿ ಕಾರ್ಯಕ್ರಮ ಪ್ರಸ್ತುತಗೊಂಡಿತು. ನಂತರ ಉಡುಪಿಯ ಅಭಿನಯ ಕಲಾವಿದರಿಂದ ಶಾಂಭವಿ ನಾಟಕ ಪ್ರದರ್ಶನಗೊಂಡಿತು. ಬೆಳಿಗ್ಗೆ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶತರುದ್ರಾಭಿಷೇಕ ನಡೆಯಿತು. ಮಧ್ಯಾಹ್ಮ ಮಹಾಅನ್ನಸಂತರ್ಪಣೆ ಜರುಗಿತು.