ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಲೋಕಸಭಾ ಚುನಾವಣೆಯ ದಿನಗಳು ಸಮೀಪಿಸುತ್ತಿದ್ದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಶಾಸಕ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಬೈಂದೂರು ಮಂಡಲ ಬಿಜೆಪಿಯ ಪ್ರಮುಖರು ಬೂತ್ ಕಡೆಗೆ ಸಮೃದ್ಧ ನಡಿಗೆ ಎಂಬ ಕಾರ್ಯಕ್ರಮದ ಮೂಲಕ ಕಾರ್ಯಕರ್ತರನ್ನು ಭೇಟಿ ಮಾಡಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಬುಧವಾರ ಕಂಬದಕೋಣೆ ಕಾಲ್ತೋಡು ಹಳಗೇರಿ ಹಾಗೂ ಹೇರೂರು ಭಾಗದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರು ಬೈಂದೂರು ಕ್ಷೇತ್ರದಿಂದ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕನಿಷ್ಠ 1 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ದೊರಕಿಸಿಕೊಡುವುದು, ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಮಾಡಲು ಶ್ರಮಿಸುವುದು ಹಾಗೂ ಕೊಲ್ಲೂರಿಗೆ ಕರೆತರುವ ಸಂಕಲ್ಪವನ್ನು ಕಾರ್ಯಕರ್ತರೊಂದಿಗೆ ಮಾಡಿದ್ದಾರೆ.
ಈ ವೇಳೆ ಅವರು ಮಾತನಾಡಿ ರಾಷ್ಟ್ರೀಯತೆ, ಹಿಂದುತ್ವ ಹಾಗೂ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯ, ಸಂಸದರಾಗಿ ಬಿ.ವೈ.ರಾಘವೇಂದ್ರ ಅವರು ಮಾಡಿರುವ ಅಭಿವೃದ್ಧಿ ಕಾರ್ಯ, ವಿಶ್ವ ನಾಯಕ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವವೇ ನಮಗೆ ಶ್ರೀರಕ್ಷೆಯಾಗಿದೆ ಎಂದರು.
ಕಾರ್ಯಕರ್ತರನ್ನು ವೈಯಕ್ತಿಕವಾಗಿ ಭೇಟಿಯಾಗುವ ಮೂಲಕ ಅವರ ಕಷ್ಟ-ಸುಖವನ್ನು ಕೇಳುವ ಉದ್ದೇಶದಿಂದ ಪ್ರತಿ ಬೂತಿಗೂ ಭೇಟಿ ನೀಡುತ್ತಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸಿದ ಕಾರ್ಯಕರ್ತರನ್ನು ಭೇಟಿಯಾಗಿ ಧನ್ಯವಾದ ತಿಳಿಸುವುದೂ ನನ್ನ ಕರ್ತವ್ಯವಾಗಿದೆ ಎಂದರು.
ಹೆರಂಜಾಲು ಹಾಗೂ ಕಂಬದಕೋಣೆ ಭಾಗದಲ್ಲಿ ಜರುಗಿದ ಕಾರ್ಯಕ್ರಮ ವೇದಿಕೆಯಲ್ಲಿ ಬಿಜೆಪಿಯ ಪ್ರಮುಖರಾದ ಮಹೇಂದ್ರ ಪೂಜಾರಿ, ಪುಪ್ಪರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಶಂಕರನಾರಾಯಣ, ಸುಕೇಶ್ ಶೆಟ್ಟಿ, ಕೆ. ನಾಗೇಶ್ ರಾವ್ ಹೆರಂಜಾಲು, ಗಣೇಶ್ ದೇವಾಡಿಗ, ತಿಮ್ಮಪ್ಪ ಗಾಣಿಗ, ನಾಗ ಪೂಜಾರಿ, ಶರತ್ ಶೆಟ್ಟಿ ಉಪ್ಪುಂದ, ಕಿಶೋರ್ ಶೆಟ್ಟಿ, ನಾಗಮ್ಮ ದೇವಾಡಿಗ, ಸುಕೇಶ್ ಶೆಟ್ಟಿ, ಮಹೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.