ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬದುಕು ಕಟ್ಟಿಕೊಡುವವರು ಮತ್ತು ಭಾವನೆಗಳನ್ನು ಕೆರಳಿಸುವವರ ನಡುವೆ ಚುನಾವಣೆ ನಡೆಯುತ್ತಿದೆ. ನಮಗೆ ಯಾವುದು ಮುಖ್ಯ ಎಂಬುದನ್ನು ನಾವು ನಿರ್ಧರಿಸಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.
ಅವರು ಕೋಟೇಶ್ವರ ಪೇಟೆಯಲ್ಲಿ ಬುಧವಾರ ಜರುಗಿದ ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೂ ಮೊದಲೂ 5 ಗ್ಯಾರೆಂಟಿಗಳನ್ನು ನೀಡಿದ್ದೆವು. ಈಗ ಎಲ್ಲಾ ಗ್ಯಾರೆಂಟಿಗಳನ್ನು ಪೂರ್ಣಗೊಳಿಸಿ ಉಳಿಸಿಕೊಂಡಿದೆ. ಶೇ.98ರಷ್ಟು ಜನರು ಗ್ಯಾರೆಂಟಿ ಫಲಾನುಭವಿಗಳಾಗಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವ ಭರವಸೆ ಇದೆ ಎಂದರು.
ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೋಳಿ ಅವರು ಮಾತನಾಡಿ ಶೋಷಿತರ, ಬಡವರ, ಮಕ್ಕಳು ಮಹಿಳೆಯರ ರಕ್ಷಣೆಗೆ ಕಾಂಗ್ರೆಸ್ ಯಾವತ್ತೂ ಇರಲಿದೆ. ಸುಳ್ಳು ಬಿಜೆಪಿಯ ಮನೆ ದೇವರು. ಈ ಚುನಾವಣೆ ಸತ್ಯ ಹಾಗೂ ಅಸತ್ಯದ ನಡುವಿನ, ಸಂವಿಧಾನದ ಪರವಾಗಿ ಹಾಗೂ ವಿರುದ್ಧವಾಗಿ ಇರುವವರ ನಡುವಿನ ಚುನಾವಣೆಯಾಗಿದೆ ಎಂದರು.
ಉಡುಪಿಯನ್ನು ಜಿಲ್ಲೆ ಮಾಡುವಂತಹ ಚಾರಿತ್ರಿಕ ಕಾರ್ಯವನ್ನು ಜಯಪ್ರಕಾಶ ಹೆಗ್ಡೆಯವರು ಮಾಡಿದ್ದಾರೆ. 20 ತಿಂಗಳು ಸಂಸದರಾಗಿದ್ದೂ ಉಭಯ ಜಿಲ್ಲೆಗಳ ಜನರು ಈಗಲೂ ನೆನಪಿಸಿಕೊಳ್ಳುವಂತಹ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಮುಂದೆಯೂ ಅಭಿವೃದ್ಧಿಯ ವಿಚಾರವನ್ನಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ ನಾನು ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡಲು ಇಷ್ಟಪಡುತ್ತಿದೆ. ಹಿಂದೆ ಮಾಡಿದ ಹಾಗೂ ಮುಂದೆ ಮಾಡಬೇಕಾದ ಕಾರ್ಯಗಳನ್ನು ಜನರ ಮುಂದಿಟ್ಟು ಮತ ಕೇಳುತ್ತಿದ್ದೇನೆ. ಕೇಂದ್ರ ಸರಕಾರ ಹೇಳಿದ ಯಾವ ಕೆಲಸವನ್ನೂ ಮಾಡಿಲ್ಲ. 2 ಕೋಟಿ ಉದ್ಯೋಗ, 15 ಲಕ್ಷ ಹಣ ಯಾವುದೇ ಸಿಗಲಿಲ್ಲ. ಈ ಬಗ್ಗೆ ಸಂಸದರನ್ನು ಜನರೂ ಪ್ರಶ್ನಿಸಲಿಲ್ಲ, ಪ್ರಶ್ನಿಸಲು ಅವರ ಜನರ ಕೈಗೆ ಸಿಗಲೂ ಇಲ್ಲ ಎಂದರು.
ರಾಜ್ಯ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪುರ ಬ್ಲಾಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕಾಂಗ್ರೆಸ್ ಮುಖಂಡರುಗಳಾದ ಮಲ್ಯಾಡಿ ಶಿವರಾಮ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಅಶೋಕ್ ಪೂಜಾರಿ, ವಿನೋದ್ ಕ್ರಾಸ್ತಾ, ಯುವ ಕಾಂಗ್ರೆಸ್ನ ಇಚ್ಚಿತಾರ್ಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.