ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶ ಚೆನ್ನಾಗಿರಬೇಕಾದರೆ ಬಿಜೆಪಿ ಆಡಳಿತದಲ್ಲಿ ಇರಬೇಕು ಎಂದು ಜನರಿಗೂ ತಿಳಿದಿದೆ. ಹಾಗಾಗಿ ಈ ಭಾರಿಯೂ ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ. ನಮ್ಮ ಕಾರ್ಯಕರ್ತರು ಕುಟುಂಬಿಕರು ಹಾಗೂ ಸ್ನೇಹಿತರನ್ನು ಮತ ಹಾಕುವಂತೆ ಪ್ರೇರೆಪಿಸಿ ಬಿಜೆಪಿ ಅಭ್ಯರ್ಥಿಯು ಅತ್ಯಧಿಕ ಅಂತರದಿಂದ ಗೆಲುವು ಸಾಧಿಸಲು ಶ್ರಮಿಸಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು.
ಅವರು ಮಂಗಳವಾರ ಬಿಜೆಪಿ ಕುಂದಾಪುರ ಮಂಡಲದ ವತಿಯಿಂದ ಮಾಬುಕಳದಿಂದ ಕುಂದಾಪುರ ಹೊಸ ಬಸ್ ನಿಲ್ದಾಣದ ತನಕ ಜರುಗಿದ ಬೃಹತ್ ಬೈಕ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ 28 ಸೀಟು ಬರಲೇಬೇಕು. ಬಿಜೆಪಿಯ ಕಾರ್ಯಕರ್ತರು ಯಾರ ಅಪ್ಪಣೆಗೂ ಕಾಯದೇ ಗೆಲುವಿಗೆ ಶ್ರಮಿಸಬೇಕಿದೆ ಎಂದ ಅವರು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸರಿಸಮನಾದ ನಾಯಕರಿಲ್ಲ. ಸರಳತೆ, ಭ್ರಷ್ಟಾಚಾರದ ಆರೋಪವಿಲ್ಲದ ನಾಯಕನ್ನು ಲೋಕಸಭೆಗೆ ಕಳುಹಿಸುವುದು ನಮ್ಮ ಜವಾಬ್ದಾರಿ ಎಂದರು.
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಕೇಂದ್ರ ಇಷ್ಟೊಂದು ಶೌಚಾಲಯ ಮಾಡಿದ್ದರೂ ಕಾಂಗ್ರೆಸ್ ಇನ್ನೂ ಚೊಂಬು ಹಿಡಿಕೊಂಡಿರುವುದು ದುರ್ದೈವ. ಪರಿವಾರ ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್ ರಾಜ್ಯದಲ್ಲಿ 12 ಸೀಟು ಕುಟುಂಬಿಕರಿಗೆ ನೀಡಲಾಗಿದೆ ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಕಿಶೋರ್ ಕುಮಾರ್, ಉದಯ ಕುಮಾರ್ ಶೆಟ್ಟಿ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ ರಾಜೇಶ್ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.