ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ.14: ತಾಲೂಕಿನ ಸಿದ್ಧಾಪುರದ ಗ್ರಾಮದಲ್ಲಿ ಇಂದು ಸಂಜೆಯ ವೇಳೆಗೆ ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಸಿದ್ಧಾಪುರ ಗ್ರಾಮದ ಸ್ವಾಮಿಹಾಡಿಯ ಸುರೇಶ್ ಶೆಟ್ಟಿ (38) ಮೃತ ದುರ್ದೈವಿ.
ಮಂಗಳವಾರ ಸಂಜೆ ಸಿದ್ಧಾಪುರದಲ್ಲಿ ಸಿಡಿಲು ಸಹಿತ ಮಳೆಯಾಗಿದ್ದು, ಈ ಸಂದರ್ಭ ಸುರೇಶ್ ಶೆಟ್ಟಿ ಎಂಬವವರು ತನ್ನ ಕಿರಿಯ ಮಗನೊಂದಿಗೆ ತನ್ನ ಮನೆಯ ಸಮೀಪವೇ ಇದ್ದ ಮಾವಿನ ಮರದಿಂದ ಮಾವಿನಹಣ್ಣು ತರಲು ತೆರಳಿದ್ದರು. ಈ ವೇಳೆ ಅವರ ಎದೆಯ ಭಾಗಕ್ಕೆ ಏಕಾಏಕಿ ಅವರಿಗೆ ಸಿಡಿಲು ಬಡಿದಿದೆ. ಅಸ್ವಸ್ಥಗೊಂಡು ಬಿದ್ದಿದ್ದ ಅವರನ್ನು ಬದುಕಿಸುವ ಪ್ರಯತ್ನ ಮಾಡಲಾಗಿತ್ತಾದರೂ, ಇದೇ ವೇಳೆ ಸಿದ್ಧಾಪುರ ಭಾಗದಲ್ಲಿ ಸಿಡಿಲಿನ ಕಾರಣಕ್ಕೆ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದರಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿದ್ದರಿಂದ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅದೃಷ್ಟವಶಾತ್ ಅವರೊಂದಿಗಿದ್ದ ಕಿರಿಯ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಹೆನ್ನಾಬೈಲುವಿನ ಬಸವ ಶೆಟ್ಟಿ ಎಂಬುವವರ ಪುತ್ರರಾದ ಸುರೇಶ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಹೋಟೆಲ್ ಕಾರ್ಮಿಕರಾಗಿದ್ದು, ಮೇ.16ರಂದು ಕಿರಿಯ ಮಗನ ಹುಟ್ಟುಹಬ್ಬಕ್ಕೆಂದು ನಿನ್ನೆಯಷ್ಟೇ ಬೆಂಗಳೂರಿನಿಂದ ಊರಿಗೆ ಬಂದು ಸಿದ್ಧಾಪುರ ಸ್ವಾಮಿಹಾಡಿಯ ಹೆಂಡತಿ ಮನೆಯಲ್ಲಿ ಉಳಿದುಕೊಂಡಿದ್ದರು. ಸಿಡಿಲಾಘಾತದಲ್ಲಿ ಮನೆಯ ಸಮೀಪವೇ ಅವರು ಮೃತಪಟ್ಟಿರುವುದು ಕುಟುಂಬಿಕರಿಗೂ ಆಘಾತವನ್ನುಂಟುಮಾಡಿದೆ. ಈ ವೇಳೆ ಸುರೇಶ್ ಶೆಟ್ಟಿ ಅವರ ಮಡದಿ, ಅತ್ತೆ, ನಾದಿನಿ ಹಾಗೂ ಹಿರಿಯ ಮಗ ಮನೆಯ ಒಳಗಿದ್ದುದರಿಂದ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರನ್ನು ಸಿದ್ಧಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಮೃತರು ತಂದೆ – ತಾಯಿ, ಮೂವರು, ಸಹೋದರರು, ಪತ್ನಿ ವಿನೋದಾ, 11 ವರ್ಷದ ಸುಮೋದ್ ಹಾಗೂ 4 ವರ್ಷದ ಸರ್ವದ ಎಂಬ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲಾಘಾತಕ್ಕೆ ಸಿದ್ದಾಪುರ ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಹಾಗೂ ವಿದ್ಯುತ್ ಸಮಸ್ಯೆ ಎದುರಾಗಿದ್ದು, ರಾತ್ರಿಯ ತನಕವೂ ದುರಸ್ತಿಯಾಗಿರಲಿಲ್ಲ.