ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸುವುದು ಶ್ಲಾಘನೀಯ. ನಮ್ಮ ಸಮಾಜದ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಗೈಯಲು ಅಗತ್ಯವಿರುವ ತರಬೇತಿ ಕೇಂದ್ರ ಸ್ಥಾಪಿಸಲು ಶ್ರಮಿಸುವುದಾಗಿ ಜಿಎಸ್‌ಬಿ ಸಮಾಜದ ಯುವ ನಾಯಕ ನಂದನ್ ಮಲ್ಯ ಹೇಳಿದರು.
ಅವರು ಕೋಟೇಶ್ವರದಲ್ಲಿ ಇಲ್ಲಿನ ಕೊಂಕಣಿ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಜಿಎಸ್‌ಬಿ ಸಮಾಜ ಬಾಂಧವರಿಗೆ 40 ಗಜಗಳ ಕ್ರಿಕೆಟ್ ಪಂದ್ಯಾಟ ರೋಯ್ಸ್ ಯುಪಿವಿಸಿ ಡೋರ್ಸ್ & ವಿಂಡೋಸ್ ಕೊಂಕಣಿ ಎಕ್ಸ್‌ಪ್ರೆಸ್ ಪ್ರೀಮಿಯರ್ ಲೀಗ್ 2024 ಉದ್ದೇಶಿಸಿ ಮಾತನಾಡಿದರು.
ಉದ್ಯಮಿ ಆಟಕೆರೆ ವಿಶ್ವನಾಥ ಪೈ ಮಾತನಾಡುತ್ತಾ ಕ್ರಿಕೆಟ್ ಆಟದ ತಮ್ಮ ಅನುಭವವನ್ನು ಮೆಲುಕು ಹಾಕುತ್ತಾ ಮುಂದಿನ ದಿನಗಳಲ್ಲಿ ಕ್ರೀಡೆ ಹಾಗೂ ಕಲೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಶಂಕರ್ ಕಾಮತ್ ಇಂತಹ ಹಲವಾರು ಪಂದ್ಯಕೂಟ ಸಮಾಜದ ಪ್ರತಿ ಊರಿನಲ್ಲಿ ನಡೆಯಬೇಕು. ಜಿಎಸ್‌ಬಿ ಸಮಾಜದವರು ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿನಿಧಿಸಬೇಕು ಎಂದು ಆಶಯಪಟ್ಟರು.
ಉದ್ಯಮಿ ಅರವಿಂದ ಕಾಮತ್, ಆಟಕೆರೆ ವಿವೇಕ ಪೈ, ಕೊಂಕಣಿ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಅನಂತ ಪೈ ಇನ್ನಿತರು ಉಪಸ್ಥಿತರಿದ್ದರು.
ಪಂದ್ಯಾಕೂಟದಲ್ಲಿ ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಪ್ರಥಮ ಸ್ಥಾನ ಹಾಗೂ ಟಿವಿಎನ್ ಸ್ಕ್ವಾಡ್ ಜಿಎಸ್‌ಬಿ ತೆಕ್ಕಟ್ಟೆ ದ್ವಿತೀಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು ಸೂಪರ್ ಎಸ್‌ವಿಎಸ್ ಕಟಪಾಡಿ ಹಾಗೂ ನಾಲ್ಕನೇ ಸ್ಥಾನವನ್ನು ರೋಷನ್ ಚಾಲೆಂಜರ್ಸ್ ಕುಂದಾಪುರ ಪಡೆದುಕೊಂಡಿದ್ದಾರೆ. ಸರಣಿ ಶ್ರೇಷ್ಠ ನಾಗೇಶ್ ಪೈ, ಉತ್ತಮ ದಾಂಡಿಗನಾಗಿ ಶರತ್ ಪ್ರಭು, ಉತ್ತಮ ಎಸೆತಗಾರನಾಗಿ ದೀಪಕ್ ಬಾದಲ್, ಉತ್ತಮ ವಿಕೇಟ್ ಕೀಪರ್ ಸತೀಶ್ ಕಾಮತ್, ಉತ್ತಮ ಫೀಲ್ಡರ್ ಷಣ್ಮುಖ ಬಾಳಿಗಾ ಪ್ರಶಸ್ತಿಯನ್ನು ಪಡೆದುಕೊಂಡರು.
ಜಿಎಸ್‌ಬಿ ಸಮಾಜ ಬಾಂಧವರಿಗೆ ನಡೆದ ಎರಡು ದಿನಗಳ ಈ ಕ್ರಿಕೆಟ್ ಪಂದ್ಯಕೂಟದಲ್ಲಿ ಉಭಯ ಜಿಲ್ಲೆಗಳ 12 ತಂಡಗಳಲ್ಲಿ 120 ಆಟಗಾರರು ಲೀಗ್ ಮಾದರಿಯ ಪಂದ್ಯಾಟದಲ್ಲಿ ಭಾಗವಹಿಸಿದರು. ಪರಿಸರ ಕಾಳಜಿಯ ದೃಷ್ಟಿಯಿಂದ ಹಾಗೂ ಪಂದ್ಯಾಟದ ಸವಿನೆನಪಿಗಾಗಿ 6 ಗಿಡಗಳನ್ನು ತಂಡದ ಮಾಲೀಕರಿಂದ ನೆಡಿಲಾಯಿತು.
ನರೇಶ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಸಿ, ನಿರೂಪಿಸಿದರು. ವಿನೀತ್ ಭಟ್ ಧನ್ಯವಾದಗೈದರು.