ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರದ ಚಿತ್ರರಸಿಕರನ್ನು ನಾಲ್ಕು ದಶಕಗಳ ಕಾಲ ರಂಜಿಸಿ ಜನಮನ್ನಣೆ ಗಳಿಸಿದ್ದ ಏಕಪರದೆಯ ಶ್ರೀ ವಿನಾಯಕ ಚಿತ್ರಮಂದಿರವು ಇತ್ತಿಚಿಗೆ ಸಿನಿಮಾ ಪ್ರದರ್ಶನವನ್ನು ಖಾಯಂ ಆಗಿ ನಿಲ್ಲಿಸಿದೆ.

1983ರಲ್ಲಿ ಕುಂದಾಪುರದ ಹಂಗಳೂರಿನಲ್ಲಿ ಕೆ. ರಾಮಚಂದ್ರ ರಾವ್ ಅವರು ಆರಂಭಿಸಿದ್ದ ಚಿತ್ರಮಂದಿರವನ್ನು ಮುಂದೆ ಅವರ ಮಗ ಪುಪ್ಪರಾಜ್ ರಾವ್ ಅವರು ಮುನ್ನಡೆಸುತ್ತಿದ್ದರು. ಸಿನಿಮಾ ರಂಗದ ಬಗ್ಗೆ ಇದ್ದ ಆಸಕ್ತಿಯಿಂದಲೇ ಚಿತ್ರಮಂದಿರ ಕಟ್ಟಿದ ರಾಮಚಂದ್ರ ರಾವ್ ಅವರ ವಿನಾಯಕ ಥಿಯೇಟರ್‌ನಲ್ಲಿ, ಡಾ. ರಾಜಕುಮಾರ್ ಅವರ ಕವಿರತ್ನ ಕಾಳಿದಾಸ ಸಿನಿಮಾ ಮೊದಲ ಪ್ರದರ್ಶನ ಕಂಡಿತ್ತು. ಫಸ್ಟ್ ಕ್ಲಾಸ್ ಸೆಕೆಂಡ್ ಕ್ಲಾಸ್ ಸೇರಿ 250 ಸೀಟು, ಬಾಲ್ಕಾನಿ 176 ಸೀಟು ಸಾಮರ್ಥ್ಯ ಹೊಂದಿದ್ದ ಚಿತ್ರಮಂದಿರದ ಆರಂಭದಲ್ಲಿ ಟಿಕೆಟ್ ಬೆಲೆ ಫಸ್ಟ್ ಕ್ಲಾಸಿಗೆ ರೂ 2.80, ಬಾಲ್ಕನಿಗೆ ರೂ.3.25 ಪೈಸೆಯಾಗಿತ್ತು. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಆರಂಭದಲ್ಲಿ ಕನ್ನಡ ಭಾಷೆಯ ಸಿನಿಮಾಗಳಿಗೆ ಸೀಮಿತವಾಗಿದ್ದ ಚಿತ್ರಮಂದಿರ ಕ್ರಮೇಣ ತಮಿಳು, ತೆಲುಗು, ಹಿಂದಿ ಭಾಷಾ ಚಿತ್ರಗಳಿಗೂ ತೆರೆದುಕೊಂಡಿತ್ತು. ಕುಂದಾಪುರದಲ್ಲಿದ್ದ ಇತರೇ 3 ಚಿತ್ರಮಂದಿರಗಳು ಬಾಗಿಲು ಹಾಕಿದ ಬಳಿಕ ಕಳೆದ ಒಂದು ದಶಕಗಳಿಂದ ಶ್ರೀ ವಿನಾಯಕ ಚಿತ್ರಮಂದಿರವೊಂದೇ ಪ್ರದರ್ಶನ ಮುಂದುವರಿಸಿತ್ತು. ಇಲ್ಲಿ ನೂರಾರು ಸಿನಿಮಾಗಳು ಹೌಸ್‌ಪುಲ್ ಪ್ರದರ್ಶನ, ಒಂದು ವಾರದಿಂದ 50-75 ದಿನಗಳ ತನಕವೂ ಪ್ರದರ್ಶನ ಕಂಡಿದ್ದವು. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಕೋವಿಡ್, ಓಟಿಟಿ ಪ್ರಭಾವ:
ಕಳೆದೊಂದು ದಶಕದಿಂದ ತಕ್ಕಮಟ್ಟಿನ ಗಳಿಕೆಯೊಂದಿಗೆ ಮುನ್ನಡೆಯುತ್ತಿದ್ದ ಚಿತ್ರಮಂದಿರ ಕೋವಿಡ್ ಬಳಿಕ ನಷ್ಟದ ಹಾದಿಯನ್ನು ಹಿಡಿದಿತ್ತು. ಸಿನಿಮಾ ವಿತರಕರಿಂದ ಹೆಚ್ಚಿನ ಬೆಲೆಗೆ ಸಿನಿಮಾ ಕೊಂಡುಕೊಂಡರೂ ಜನ ಚಿತ್ರಮಂದಿರದತ್ತ ಬಾರದೇ ಇರುವುದು, ಓಟಿಟಿಗೆ ಒಗ್ಗಿಕೊಂಡಿರುವುದು, ಚಿತ್ರಮಂದಿರದ ಕೆಲಸಗಾರರ ಸಂಬಳ, ವಿದ್ಯುತ್ ವೆಚ್ಚ ಹೆಚ್ಚಳ ಇವೆಲ್ಲವೂ ಒಂದು ಕಡೆಗೆ ಹೊಡೆತ ನೀಡಿದರೇ, ಕುಂದಾಪುರದಲ್ಲಿ ಆರಂಭಗೊಂಡ ಮಲ್ಟಿಪ್ಲೆಕ್ಸ್ ಕೂಡ ಏಕಪರದೇ ಚಿತ್ರಮಂದಿರಕ್ಕೆ ಹೊಡೆತ ನೀಡಿತು. ಅಂತಿಮವಾಗಿ ನಿರ್ವಹಣೆ ಸಾಧ್ಯವಾಗದೇ, ಚಿತ್ರಮಂದಿರವನ್ನು ಮುಚ್ಚಲೇಬೇಕಾದ ಸ್ಥಿತಿ ಎದುರಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾದ ಪ್ರದರ್ಶನದ ಬಳಿಕ ಚಿತ್ರಮಂದಿರವು ಮುಚ್ಚಲ್ಪಟ್ಟಿತು. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಕಾಲದ ಹೊಡೆತಕ್ಕೆ ಸಿಲುಕಿ ಸಾವಿರಾರು ಸಿನಿಪ್ರಿಯರನ್ನು ರಂಜಿಸಿದ ಕುಂದಾಪುರದಲ್ಲಿದ್ದ ಮೂರು ಚಿತ್ರಮಂದಿಗಳಾದ ಗೀತಾಂಜಲಿ, ಪೂರ್ಣಿಮಾ, ಶಶಿಧರ್ ದಶಕಗಳ ಹಿಂದೆಯೇ ಬಾಗಿಲು ಹಾಕಿದ್ದರೇ, ಶ್ರೀ ವಿನಾಯಕ ಟಾಕೀಸ್ ಇತ್ತಿಚಿಗೆ ತನ್ನ ಪ್ರದರ್ಶನವನ್ನು ನಿಲ್ಲಿಸಿದ್ದು, ಚಿತ್ರಮಂದಿರವನ್ನು ಅವಲಂಭಿಸಿಕೊಂಡಿದ್ದ ಅಂಗಡಿ, ರಿಕ್ಷಾ ಚಾಲಕರಿಗೂ ಇದು ಪರೋಕ್ಷ ಹೊಡೆತ ನೀಡಿದೆ.