ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗೋಪಾಡಿ ಗ್ರಾಮದ ದಾಸನಹಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೇ 16ರ ರಾತ್ರಿ ಪತ್ತೆಯಾಗಿದ್ದು, ಆಕೆಯ ಮೃತದೇಹದೊಂದಿಗೆ ಬುದ್ಧಿಮಾಂದ್ಯ ಪುತ್ರಿಯಾದ ಪ್ರಗತಿ 72 ಗಂಟೆಗೂ ಹೆಚ್ಚು ಕಾಲ ಕಳೆದಿರುವುದು ಬೆಳಕಿಗೆ ಬಂದಿದೆ.
ಮೂಡುಗೋಪಾಡಿಯದಾಸನಹಾಡಿಯ ಮನೆಯಲ್ಲಿ ಜಯಂತಿ ಅವರು ಪುತ್ರಿ ಪ್ರಗತಿಯೊಂದಿಗೆ ನೆಲೆಸಿದ್ದರು. ಪ್ರಗತಿ ಚಿಕ್ಕಂದಿನಿಂದಲೇ ಬುದ್ಧಿಮಾಂದ್ಯರಾಗಿದ್ದು, ಇತ್ತೀಚೆಗೆ ಮಧುಮೇಹ ಹೆಚ್ಚಾಗಿದ್ದರಿಂದ ಒಂದು ಕಾಲನ್ನೇ ಕತ್ತರಿಸಲಾಗಿತ್ತು. ಅದಾಗಿಯೂ ಪ್ರಗತಿಯನ್ನು ತಾಯಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಅಂದುಕೊಂಡಂತೆ ಆಗಿದ್ದರೆ ಮೇ 14ರಂದು ಆಕೆಗೆ ಕೃತಕ ಕಾಲು ಜೋಡಣೆ ಆಗಬೇಕಿತ್ತು. ಜಯಂತಿ ಅವರ ಪತಿ ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು, ಕೆಲವು ವರ್ಷಗಳ ಹಿಂದೆಯೇ ಮೃತ ಪಟ್ಟಿದ್ದರು.
ಮೇ 12ರಂದು ಜಯಂತಿ ಪುತ್ರಿಯ ಚೇತರಿಕೆಗಾಗಿ ಆನೆಗುಡ್ಡೆ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ಮೇ 13ರಂದು ಕೋಟೇಶ್ವರ ದೇವ ಸ್ಥಾನಕ್ಕೆ ತೆರಳಲು ಇರುವುದಾಗಿ ಸ್ಥಳೀಯ ರಿಕ್ಷಾ ಚಾಲಕರೊಬ್ಬರಿಗೆ ತಿಳಿಸಿದ್ದರು. ಆ ರಿಕ್ಷಾ ಚಾಲಕ ಮೇ 13ರಂದು ಬೆಳಗ್ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಅಂದರೆ ಮೇ 12ರ ಸಂಜೆಯಿಂದ ಮೇ 13ರ ಬೆಳಗ್ಗಿನ ನಡುವೆ ಬಿದ್ದು ಗಾಯಗೊಂಡು ಸಾವನ್ನಪ್ಪಿರಬಹುದೇ ಎನ್ನುವ ಅನುಮಾನವಿದೆ. 3 ದಿನಗಳ ಕಾಲ ಆ ಮನೆಯಲ್ಲಿ ತಾಯಿಯ ಮೃತದೇಹದೊಂದಿಗೆ ನೀರು, ಆಹಾರವಿಲ್ಲದೆ ಪುತ್ರಿ ಪ್ರಗತಿ ಒಬ್ಬಳೇ ಕಳೆದಿರುವುದು ದಿಗ್ಭ್ರಮೆ ಮೂಡಿಸಿದೆ. ಗೋಡೆ, ನೆಲದ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ನಿರ್ದಿಷ್ಟ ಕಾರಣವೇನೆಂದು ತಿಳಿದು ಬರಬಹುದು.
ಮೂರು ದಿನಗಳಿಂದ ಮನೆಯ ಗೇಟು ತೆರೆಯದ್ದನ್ನು ಗಮನಿಸಿದ ಅಕ್ಕ-ಪಕ್ಕದ ಮನೆಯವರು ಇವರಿಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಮೇ 16ರ ರಾತ್ರಿ ವಿಪರೀತ ದುರ್ವಾಸನೆ ಬಂದಿದ್ದರಿಂದ ಸ್ಥಳೀಯರು ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ ಅವರಿಗೆ ತಿಳಿಸಿದ್ದು, ಅವರು ಸ್ಥಳೀಯರೊಂದಿಗೆ ಇವರ ಸಂಬಂಧಿಕರನ್ನು ಪತ್ತೆ ಹಚ್ಚುವಲ್ಲಿ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು. ರಾತ್ರಿ 11ರ ವೇಳೆಗೆ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಆಗಮಿಸಿದ ಕುಂದಾಪುರ ಎಸ್ಐ ವಿನಯ ಎಸ್. ಕೊರ್ಲಹಳ್ಳಿ ಹಾಗೂ ಪೊಲೀಸ್ ಸಿಬಂದಿ ಆ ಮನೆಯ ಆ ಬಾಗಿಲು ಒಡೆದು ಅಸ್ವಸ್ಥಗೊಂಡಿದ್ದ ಯುವತಿಯನ್ನು ರಕ್ಷಿಸಿ, ಉಪಚರಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.
ಕೋಟೇಶ್ವರ ಅಂಕದಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಗತಿ (32) ಅವರು ಸದ್ಯ ಚೇತರಿಕೆ ಕಾಣುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.