ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲೆ ಒಂದು ವಿಶಾಲವಾದ ವಿಷಯ. ಎಲ್ಲಾ ಕಲೆಯ ಮೂಲ ಉದ್ದೇಶ ಆ ಕಲೆಯ ರಸೋತ್ಪಾದನೆ. ಕಲೆಯ ಅಭಿರುಚಿ ಎಲ್ಲರಲ್ಲೂ ಇರಬೇಕು. ಕಲೆ ಹೃದಯ ಸಂಸ್ಕಾರವನ್ನು ನೀಡುತ್ತದೆ, ಸಮಾಜವನ್ನು ಸುಸಂಸ್ಕೃತವನ್ನಾಗಿಸಲು ಮತ್ತು ಜ್ಞಾನ ಸಂಪಾದನೆಗೆ ಸಹಕಾರಿಯಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಬಿಜೂರು ವಿಶ್ವೇಶ್ವರ ಅಡಿಗ ಹೇಳಿದರು.
ಲಾವಣ್ಯ ಬೈಂದೂರು ಇದರ ಅಂಗ ಸಂಸ್ಥೆಯಾದ ರಿದಂ ನೃತ್ಯ ಮತ್ತು ಕಲಾ ಶಾಲೆಯ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಹಾಗೂ ಲಾವಣ್ಯ ಹಿರಿಯ ನಿರ್ದೇಶಕ ಬಿ. ಗಣೇಶ್ ಕಾರಂತ್ ಅವರು ಅಧ್ಯಕ್ಷತೆ ವಹಿಸಿದ್ದರು.
ವೈಯಕ್ತಿಕ ವಿಚಾರಗಳನ್ನು ಮೀರಿದ ಸಂಬಂಧವೇರ್ಪಡಿಸಿ ನಮ್ಮನ್ನು ಒಂದುಗೂಡಿಸುವ ಶಕ್ತಿ ಕಲೆ ಮತ್ತು ಸಾಹಿತ್ಯಕ್ಕಿದೆ. ತಾಯಿಯಂತಹ ಕರುಣೆ ಮತ್ತು ಮಗುವಿನಂತಹ ನಿಷ್ಕಪಟ ದೃಷ್ಠಿಯಿಂದ ನೋಡಿದರೆ ನಮಗೆ ಜಗತ್ತು ಸುಂದರ ಹಾಗೂ ಸನಿಹವಾಗುತ್ತದೆ. ಜಾತಿ, ಮತ, ಅಂತಸ್ತುಗಳ ನರಕದಿಂದ ಮೇಲೆತ್ತುವ ಸಾಮರ್ಥ್ಯ ಕೂಡ ಕಲೆಗೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು ಶಿರೂರು, ಕುಂದಾಪುರ ವೆಂಕಟ್ರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಗಾಣಿಗ, ಪ್ರಥಮದರ್ಜೆ ವಿದ್ಯುತ್ ಗುತ್ತಿಗೆದಾರರಾದ ಸವಿತಾ ದಿನೇಶ್, ಶಿಶುಮಂದಿರದ ಕಾರ್ಯದರ್ಶಿ ರಾಜೇಶ ಐತಾಳ್ ಉಪಸ್ಥಿತರಿದ್ದರು.
ಹಿರಿಯ ಕಲಾವಿದ ಹರೇಗೋಡು ಉದಯ್ ಆಚಾರ್ಯಅವರನ್ನು ಸನ್ಮಾನಿಸಲಾಯಿತು. ನೃತ್ಯಶಾಲಾ ವ್ಯವಸ್ಥಾಪಕ ಮೂರ್ತಿ ಡಿ. ಪ್ರಾರ್ಥಿಸಿದರು. ಸಂಸ್ಥೆಯ ಸಂಚಾಲಕ ಹಾಗೂ ನಿರ್ದೇಶಕ ನಾಗೇಂದ್ರ ಕುಮಾರ್ ಬಂಕೇಶ್ವರ್ ಸ್ವಾಗತಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಕಾರ್ಯಕ್ರಮ ನಿರ್ವಹಿಸಿದರು.
ತದನಂತರ ರಿಧಂ ನೃತ್ಯ ಮತ್ತು ಕಲಾ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಮತ್ತು ಕ್ಯಾತ ಗಾಯಕರಿಂದ ಸಂಗೀತ ರಸಮಂಜರಿ ನಡೆಯಿತು.