ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವೈದ್ಯಾಧಿಕಾರಿಯೊಬ್ಬ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಹೋದ್ಯೋಗಿ ವೈದ್ಯೆಯೊಬ್ಬರು ನೀಡಿದ ದೂರಿನಂತೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಅವರ ವಿರುದ್ಧ ಮಾನಭಂಗಕ್ಕೆ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವೈದ್ಯನನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಸದ್ಯ ವೈದ್ಯ ತಲೆಮರೆಸಿಕೊಂಡಿದ್ದಾನೆ.
ಕುಂದಾಪುರದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಗೆ ಕಳೆದ ಆರು ತಿಂಗಳಿನಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಮಾನಭಂಗಕ್ಕೆ ಯತ್ನಿಸಿದ್ದಾಗಿ ಮಹಿಳಾ ವೈದ್ಯ ಗುರುವಾರ ಸಂಜೆ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು 354, 354A, 504, 506, 509 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಸಾರ್ವಜನಿಕರು ಆಕ್ರೋಶಿತರಾಗಿದ್ದು, ಆರೋಪಿ ರಾಬರ್ಟ್ ರೆಬೆಲ್ಲೋ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿಗಳು ವೈದ್ಯನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
32 ವರ್ಷ ಪ್ರಾಯದ ವಿವಾಹಿತ ಮಹಿಳಾ ವೈದ್ಯೆ ಕುಂದಾಪುರದ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಎನ್.ಆರ್.ಸಿ. ವಿಭಾಗದಲ್ಲಿ ಎನ್.ಆರ್.ಎಚ್.ಎಂ ಅಡಿಯಲ್ಲಿ ವೈದ್ಯಾಧಿಕಾರಿಯಾಗಿ ಅಕ್ಟೋಬರ್ 2023ರಿಂದ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯದ ಆರಂಭದ ದಿನಗಳಿಂದಲೇ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ. ರಾಬರ್ಟ್ ರೆಬೆಲ್ಲೋ ಮೊಬೈಲ್ ಮೂಲಕ ಅಶ್ಲೀಲ ಸಂಭಾಷಣೆ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕರ್ತವ್ಯದ ಸಮಯ ಮುಗಿದ ಮೇಲೆ ರಾತ್ರಿ 10-11 ಗಂಟೆಯ ನಂತರದಲ್ಲಿ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿ ತನ್ನೊಂದಿಗೆ ಸಹಕರಿಸು ಎಂದು ಕಿರುಕುಳ ನೀಡುತ್ತಿದ್ದ. ಕರ್ತವ್ಯದ ಸಮಯವೂ ಲಂಚ್‌ಗೆ, ಡಿನ್ನರ್‌ಗೆ ಬಾ ಎಂದು ಪೀಡಿಸಿ ಪುಸಲಾಯಿಸುತ್ತಿದ್ದು ಆತನ ಕೋರಿಕೆಗಳನ್ನು ನಿರಾಕರಿ ಸಿದ್ದರಿಂದ ಹತಾಶೆಗೊಳಗಾಗಿ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿದ್ದಲ್ಲದೆ ಬಳಿಕ ಮಹಿಳೆಯ ಮೊಬೈಲ್‌ನಲ್ಲಿದ್ದ ಫೋಟೋ ವಿಡಿಯೋ ಹಾಗೂ ಮೆಸೇಜ್ ಗಳನ್ನು ಡಿಲಿಟ್ ಮಾಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾಗಿ ವೈದ್ಯೆ ದೂರಿನಲ್ಲಿ ತಿಳಿಸಿದ್ದಾರೆ.