ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಿಲ್ಲಾದ್ಯಂತ ಮುಂಗಾರು ಚುರುಕುಗೊಂಡಿದ್ದು ಎಲ್ಲೆಡೆಯೂ ಭಾರಿ ಮಳೆಯಾಗುತ್ತಿದೆ. ಶನಿವಾರ ಬೆಳಿಗ್ಗೆಯಿಂದ ನಿರಂತರವಾಗಿ ಸುರಿದ ಮಳೆಗೆ ಯಡ್ತರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳಿಗೆ ನೀರು ನುಗ್ಗಿದ್ದು, ಮಕ್ಕಳಿಗೆ ರಜೆ ಘೋಷಿಸಲಾಗಿದೆ.
ನಿರಂತರ ಮಳೆಯಿಂದಾಗಿ ರಸ್ತೆಯಿಂದ ತಗ್ಗು ಪ್ರದೇಶದಲ್ಲಿರುವ ಯಡ್ತರೆ ಶಾಲೆಯ ಆವರಣಕ್ಕೆ ನೀರು ನುಗ್ಗಿದ್ದು ಹೊರ ಹರಿವು ಇಲ್ಲದೇ ಇದ್ದುದರಿಂದ ವಿದ್ಯಾರ್ಥಿಗಳ ಮೊಣಕಾಲಿನ ತನಕವೂ ನೀರು ತುಂಬಿಕೊಂಡಿತ್ತು. ಎರಡು ತರಗತಿ ಕೊಠಡಿಗಳು ಹಾಗೂ ಶಾಲಾ ಶಿಕ್ಷಕರ ಕಛೇರಿ ಸಂಪೂರ್ಣ ಜಲಾವೃತಗೊಂಡು ಅಪಾಯಕಾರಿ ಸ್ಥಿತಿ ಎದುರಾಗಿದೆ.




ಶಾಲೆ ಎದುರಿನ ಚರಂಡಿ ಬ್ಲಾಕ್ ಕಾರಣ:
ಶಾಲೆ ಎದುರಿನ ಚರಂಡಿಯನ್ನು ಮುಚ್ಚಿರುವುದರಿಂದ ಶಾಲೆಯೊಳಕ್ಕೆ ಕೃತಕ ನೆರೆ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಿಂದಿನಿಂದಲೂ ಶಾಲೆ ಕಾಂಪೌಂಡ್ ಎದುರಿನ ಚರಂಡಿಯ ಮೂಲಕ ನೀರು ಹರಿದು ಹೋಗಿ ನದಿ ಸೇರುತ್ತಿತ್ತು. ಅದಕ್ಕೆ ತಡೆ ಉಂಟಾಗಿದ್ದು ನೀರು ಹರಿದು ಹೋಗಲು ದಾರಿ ಇಲ್ಲದಾಗಿದೆ. ಸದ್ಯ ತಾತ್ಕಾಲಿಕವಾಗಿ ಶಾಲೆಯ ಹಿಂಭಾಗದ ಗದ್ದೆಗೆ ನೀರು ಹರಿದು ಹೋಗಲು ದಾರಿ ಮಾಡಿಕೊಡಲಾಗಿದೆ.


ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ:
ಶಾಲೆಯಲ್ಲಿ ಕೃತಕ ನೆರೆ ಉಂಟಾಗಿದ್ದರಿಂದ ಬೆಳಿಗ್ಗೆ ವಿದ್ಯಾರ್ಥಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಅವರು ಶಾಲೆ ಎದುರಿನ ಚರಂಡಿ ದುರಸ್ತಿಗೆ ಪಟ್ಟಣ ಪಂಚಾಯತಿಗೆ ತಿಳಿಸಿದ್ದು, ಶನಿವಾರ ಯಡ್ತರೆ ಶಾಲಾ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದಾರೆ. ಶಾಲೆಯಲ್ಲಿ ಎರಡು ಪ್ರತ್ಯೇಕ ಕಟ್ಟಡಗಳಿದ್ದು, 32 ಮಕ್ಕಳು ಮಾತ್ರವೇ ಇರುವುದರಿಂದ ನೀರು ತುಂಬಿದ ಬಲಭಾಗದ ಕಟ್ಟಡದಲ್ಲಿ ತರಗತಿ ನಡೆಸದಂತೆ ತಿಳಿಸಿದ್ದು, ಎಡಭಾಗದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ತರಗತಿಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.