ಬೈಂದೂರು: ಸಿಬ್ಬಂದಿಯೊಬ್ಬ ತನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ತನ್ನ ಕರ್ತವ್ಯ ಅರಿತು ಕೆಲಸಮಾಡಿದಾಗ ಜನಮನ್ನಣೆಗಳಿಸಲು ಸಾಧ್ಯ ಎನ್ನುವುದಕ್ಕೆ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಂಕರ ಕೊಠಾರಿ ಉತ್ತಮ ನಿದರ್ಶನ ಎಂದು ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು.
ಯಡ್ತರೆಯ ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ನಡೆದ ಇತ್ತೀಚೆಗೆ ನಿವೃತ್ತರಾದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂಕರ ಕೊಠಾರಿ ಹಾಗೂ ವ್ಯವಸ್ಥಾಪಕ ವೈ. ಸುರೇಶ್ ಶ್ಯಾನುಬಾಗ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸುಧೀರ್ಘ 19 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಕೊಠಾರಿ ಅವರು ಸಂಘದ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯ ನಡುವೆ ಸಂಪರ್ಕ ಕೊಂಡಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಂಘದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ತರವಾಗಿದೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜು ಪೂಜಾರಿ, ಸಂಘದ ನಿರ್ದೇಶಕರಾದ ವೆಂಕ್ಟ ಪೂಜಾರಿ, ಸದಾಶಿವ ಪಡುವರಿ, ಬಾಬು ಶೆಟ್ಟಿ, ಚಿಕ್ಕು ಪೂಜಾರಿ, ಎನ್. ನಾಗರಾಜ ಶೆಟ್ಟಿ, ವಸಂತ ಕುಮಾರ ಶೆಟ್ಟಿ, ಜ್ಯೋತಿ ಸೇರುಗಾರ್, ರಜನಿ ಶ್ಯಾನುಬಾಗ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಿಟ್ಟಣ್ಣ ರೈ ಅವರು ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂಕರ ಕೊಠಾರಿ ಹಾಗೂ ವ್ಯವಸ್ಥಾಪಕ ವೈ. ಸುರೇಶ್ ಶ್ಯಾನುಬಾಗ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸಿಬ್ಬಂಧಿಗಳಾದ ತಿಮ್ಮಪ್ಪ ಬಿಲ್ಲವ ಸ್ವಾಗತಿಸಿದರು, ಕಿಟ್ಟಣ್ಣ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಶೆಟ್ಟಿ ವಂದಿಸಿ, ಸುಧಾಕರ ಪಿ. ನಿರೂಪಿಸಿದರು.