ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಉಡುಪಿ ಆಯುಷ್ ಇಲಾಖೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ತಾಲೂಕು ಸರಕಾರಿ ಆಯುಷ್ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ, 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ “ಯೋಗೋತ್ಸವ – ಪೂರ್ವಿಭಾವಿ ಯೋಗ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ, ಮಹಿಳೆಯರ ಆರೋಗ್ಯದಲ್ಲಿ ಯೋಗದ ಮಹತ್ವದ ಬಗ್ಗೆ ತಿಳಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕುಂದಾಪುರ ಲಯನ್ಸ್ ಕ್ಲಬ್ ಅಮೃತಧಾರದ ಅಧ್ಯಕ್ಷರಾದ ಆಶಾ ಶಿವರಾಂ ಶೆಟ್ಟಿ, ಆಯುರ್ವೇದ ಆಹಾರ ಪದ್ಧತಿಯ ಬಗ್ಗೆ ಮಾಹಿತಿಯನ್ನು ಒಳಗೊಂಡ ಕರಪತ್ರಗಳನ್ನು ಬಿಡುಗಡೆಗೊಳಿಸಿ ಯೋಗದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದೀಪರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾದ ತಾಲೂಕು ಸರಕಾರಿ ಆಯುಷ್ ಆಸ್ಪತ್ರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದ ವೈದ್ಯರಾದ ಡಾ. ಶಿಲ್ಪಾ. ಕೆ ಇವರು ಮಹಿಳೆಯರಿಗೆ ಯೋಗ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರು.
ಆಯುರ್ವೇದ ಆಹಾರ ಕ್ರಮಗಳ ಬಗ್ಗೆ ಮಾಹಿತಿಯನ್ನು ಹಾಗೂ ಯೋಗ ಪ್ರಾತ್ಯಕ್ಷಿಕೆಯನ್ನು ನೆರೆದ ಸುಮಾರು 100 ಮಂದಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ನಡೆಸಿಕೊಟ್ಟರು.
ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಭಾಗ್ಯಲಕ್ಷ್ಮಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಕುಂದಾಪುರ ಲಯನ್ಸ್ ಕ್ಲಬ್ ಅಮೃತಧಾರವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಫಲಹಾರ, ಕಷಾಯ ವಿತರಣೆ ಮಾಡಲಾಯಿತು.















