ಬೈಂದೂರು: ಈ ಸಾಲಿನ ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯು ಮಂಗಳವಾರ ತಾರಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇಲಾಖೆ ಪ್ರತಿಭಾ ಕಾರಂಜಿಯಂತಹ ವಿನೂತನ ಕಾರ್ಯಕ್ರಮವನ್ನು ಸಂಘಟಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಹಿಂದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಸಿಗದೇ ಅವರ ಪ್ರತಿಭೆ ಕಮರಿ ಹೋಗುತ್ತಿತ್ತು, ಆದರೆ ಈಗ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ದೊರಕುತ್ತಿದೆ ಎಂದರು.
ಪಡುವರಿ ಗ್ರಾ.ಪಂ. ಅಧ್ಯಕ್ಷೆ ದೀಪಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಮಾಜಿ ಜಿ.ಪಂ. ಸದಸ್ಯ ಮದನ ಕುಮಾರ, ತಾ.ಪಂ. ಸದಸ್ಯರಾದ ಪ್ರಸನ್ನ ಕುಮಾರ, ಗೌರಿ ದೇವಾಡಿಗ ಬಿಜೂರು, ಗ್ರಾ.ಪಂ. ಸದಸ್ಯರಾದ ಸುರೇಶ ಬಟ್ವಾಡಿ, ಸುರೇಶ ದೇವಾಡಿಗ, ಸರೋಜ, ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಯ್ಯ ಜಿ. ಖಾರ್ವಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ನಿವೃತ್ತ ಅಭಿಯಂತರ ಎನ್.ಎಂ. ಖಾರ್ವಿ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕಾರ್ಯದರ್ಶಿ ಜಯಾನಂದ ಪಟಗಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ಶೇಖರ ಪೂಜಾರಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೇಶವ ನಾಯ್ಕ, ಗಣಪತಿ ಎಸ್, ಅರುಣ ಕುಮಾರ ಶೆಟ್ಟಿ, ರಾಘವೇಂದ್ರ ದೇವಾಡಿಗ, ಬಾಲಯ್ಯ ಶೇರುಗಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ಬಿಇಓ ನಾಗೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು, ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ ಸ್ವಾಗತಿಸಿದರು, ವೆಂಕಪ್ಪ ಉಪ್ಪಾರ್ ವಂದಿಸಿ, ಗಣೇಶ ಪೂಜಾರಿ ನಿರೂಪಿಸಿದರು.