ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ವಿಶೇಷ ಚೇತನ ಮಕ್ಕಳು ಶಿಕ್ಷಣದ ಕನಸು ಕಾಣುವುದೇ ದೊಡ್ಡ ವಿಚಾರವಾಗಿರುವಾಗ, ಈ ಗ್ರಾಮದ ಮಕ್ಕಳಿಬ್ಬರು ನಿತ್ಯವೂ ಆಂತರಿಕ ಹಾಗೂ ಬಾಹ್ಯ ಬದುಕಿನ ನಡುವೆ ಸಂಘರ್ಷಕ್ಕಿಳಿದು ಶಿಕ್ಷಣದ ಬೆಳಕು ಕಾಣುತ್ತಿದ್ದಾರೆ. ಆದರೆ ಇದಕ್ಕಾಗಿ ಆ ಕುಟುಂಬದ ಪರಿಪಾಠಲು ದೇವರಿಗೆ ಪ್ರೀತಿ! ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಳಜಿತ ಗ್ರಾಮದ ಹುಲ್ಕಡಿಕೆ ಗುಡಿಕೇರಿ ಸುರೇಶ್ ಹಾಗೂ ಸುಜಾತ ಎಂಬುವವರು ಕುಟುಂಬದ್ದು ಕರುಣಾಜನಕ ಕಥೆ.


ಯಳಜಿತ ಸರಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾತ್ವಿಕ್ ಹಾಗೂ 7ನೇ ತರಗತಿಯಲ್ಲಿ ಓದುತ್ತಿರುವ ಸನ್ನಿಕಾ ಸಹೋದರ ಸಹೋದರಿಯರು 2 ವರ್ಷದವರಿರುವಾಗಲೇ ಎಂಡೋಸಲ್ಪಾನ್ ಪೀಡಿತರಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಕೂಲಿ ಕೆಲಸವನ್ನೇ ಅವಲಂಭಿಸಿ ಬದುಕುತ್ತಿರುವ ಸುರೇಶ್ ಹಾಗೂ ಸುಜಾತ ದಂಪತಿಗಳು ಕಳೆದ 14 ವರ್ಷದಿಂದ ಮಕ್ಕಳ ಪಾಲನೆಯಲ್ಲಿಯೇ ಬಹುಪಾಲು ಸಮಯವನ್ನು ಕಳೆಯುವಂತಾಗಿದೆ. ಕುಟುಂಬದ ಈ ಸಂಕಷ್ಟವನ್ನೂ ದಾಟಿ ಇಬ್ಬರೂ ವಿಕಲಚೇತನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಪಾಲಕರ ಹಂಬಲ ಛಲವಾಗಿ ಬದಲಾಗಿದೆ. ಅದಕ್ಕಾಗಿಯೇ ತಂದೆ ನಿತ್ಯವೂ ಮಕ್ಕಳನ್ನು ಹೊತ್ತುಕೊಂಡೇ ಮಳೆಗಾಲದಲ್ಲಿ ತುಂಬಿ ಹರಿಯುವ ಕಿರು ಹೊಳೆಯನ್ನು ದಾಟಿ ಶಾಲೆಗೆ ಕರೆದೊಯ್ಯುತ್ತಿದ್ದರೇ, ತಾಯಿ ಅವರೊಂದಿಗೆ ಇದ್ದು ಕಲಿಕೆಗೆ ಸಹಕರಿಸುತ್ತಿದ್ದಾರೆ. ಬದುಕು ನಿರ್ವಹಣೆಯ ಸಂಕಷ್ಟದ ಜೊತೆಗೆ ಮೂಲಭೂತ ಸೌಕರ್ಯದ ಕೊರತೆ ಈ ಕುಟುಂಬವನ್ನು ಕಾಡುತ್ತಿದೆ.


ಹುಲ್ಕಡಿಕೆ – ಗುಡಿಕೇರಿ ಕಿರುಹೊಳೆಗೆ ಸೇತುವೆಯಿಲ್ಲ:
ಹುಲ್ಕಡಿಕೆ ಕಿರುಹೊಳೆಯನ್ನು ದಾಟಿದರೆ ಗುಡಿಕೇರಿ ಊರು. ಅಲ್ಲಿ ಮರಾಠಿ ಸಮುದಾಯದ 8ಕ್ಕೂ ಅಧಿಕ ಮನೆಗಳಿವೆ. ಆದರೆ ಮೂಲಭೂತ ಸೌಕರ್ಯವನ್ನು ಮಾತ್ರ ಕೇಳುವಂತಿಲ್ಲ. ಇದೇ ಕಿರುಹೊಳೆಯನ್ನು ದಾಟಿ ಸದ್ಯ ವಿಕಲಚೇತನರೂ ಸೇರಿದಂತೆ ನಾಲ್ಕೈದು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಜೋರು ಮಳೆ ಬಂದರಂತೂ ಹೊಳೆ ದಾಟಲಾಗದೇ ಶಾಲೆಗೆ ತೆರಳಲಾರದ ಸ್ಥಿತಿಯಿದೆ. ಕಳೆದೊಂದು ವಾರದಿಂದ ವಿಕಲಚೇತನ ವಿದ್ಯಾರ್ಥಿಗಳು, ಇತರ ವಿದ್ಯಾರ್ಥಿಗಳು ನೀರಿನ ಹರಿವು ಹೆಚ್ಚಿರುವುದರಿಂದ ಶಾಲೆ ಕಡೆಗೆ ಮುಖಮಾಡಿಲ್ಲ. ಉಳಿದ ಕುಟುಂಬದ ಹಿರಿಯರು ಅನಾರೋಗ್ಯ ಪೀಡಿತರನ್ನು ಕೇಳುವವರಿಲ್ಲ.
ಹುಲ್ಕಡಿಕೆಯ ಈ ಕಿರುಹೊಳೆಯ ಸುತ್ತಮುತ್ತ ನೂರಾರು ವರ್ಷಗಳಿಂದ ಮರಾಠಿ ಸಮುದಾಯದ ನೂರಾರು ಮಂದಿ ವಾಸಿಸುತ್ತಿದ್ದು, ರಸ್ತೆ, ಸೇತುವೆ, ಬಸ್, ನೆಟ್ವರ್ಕ್ ಸೇರಿದಂತೆ ಹಲವು ಮೂಲಸೌಕರ್ಯ ವಂಚಿತರಾಗಿದ್ದಾರೆ.



ಹುಲ್ಕಡಿಕೆ ಹಾದಿಯೇ ದುಸ್ತರ:
ಹುಲ್ಕಡಿಕೆ ತೆರಳಬೇಕಾದರೆ ವಸ್ರೆಯಿಂದ ಸುಮಾರು 7ಕಿ.ಮೀ ಅರಣ್ಯ ತಪ್ಪಲು ಪ್ರದೇಶದಲ್ಲಿ ಸಂಚಾರಿಸಬೇಕಾಗಿದ್ದು ರಸ್ತೆಯೂ ದುಸ್ತರವಾಗಿದೆ. ದಶಕದ ಹಿಂದೆ ಈ ಮಾರ್ಗದ ಕೆಲಭಾಗ ಡಾಂಬರೀಕರಣಗೊಂಡಿದ್ದು, ಅಲ್ಲಿಂದಿಚಿಗೆ ದುರಸ್ತಿ ಕಾಣದೇ ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗದಲ್ಲಿಯೇ ಹುಲ್ಕಡಿಕೆ ಭಾಗದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿನಿತ್ಯ ನಡೆದುಕೊಂಡೇ ಬೇರೆ ಬೇರೆ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ವಯೋವೃದ್ಧರು, ಅನಾರೋಗ್ಯ ಪೀಡಿತರ ಸ್ಥಿತಿಯಂತೂ ಹೇಳತೀರದು. ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೇ ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಚಾಲಕರೂ ಕೂಡ ಈ ಮಾರ್ಗದಲ್ಲಿ ಬರಲು ಹಿಂದೇಟು ಹಾಕುತ್ತಾರೆ. ಮೊಬೈಲ್ ನೆಟ್ವರ್ಕ್ ಸಿಗಲು ಗುಡ್ಡ ಹತ್ತಬೇಕಾದ ಅನಿವಾರ್ಯತೆ ಇದೆ.

ನಟರಾಜ ಸರ್ವಿಸ್ ಮಾತ್ರ:
ಈ ಭಾಗದ ಜನರು ನಿತ್ಯದ ಕೆಲಸ, ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ತೆರಳಲು ನಡೆದೇ ಸಾಗಬೇಕಾದ ಸ್ಥಿತಿ ಇದೆ. ಬಸ್ ವ್ಯವಸ್ಥೆ ಇಲ್ಲ. ಅದರಲ್ಲಿಯೂ ಅರಣ್ಯ ಪ್ರದೇಶವನ್ನು ದಾಟಿ ಬರುವವರಿಗೆ ನಿತ್ಯವೂ ಕಾಡು ಪ್ರಾಣಿಗಳ ಭಯ ಕಾಡುತ್ತಿದೆ. ರಸ್ತೆ ಹದಗೆಟ್ಟಿರುವುದರಿಂದ ರಿಕ್ಷಾಗಳೂ ಕೂಡ ಒಂದು ಹಂತದ ತನಕ ಮಾತ್ರ ತೆರಳುತ್ತವೆ ಅಲ್ಲಿಂದ ನಡೆದು ಸಾಗುವುದು ಅನಿವಾರ್ಯವಾಗಿದೆ. ಸರಕಾರದ ನೀಡುವ ಉಚಿತ ಪಡಿತರ ಪಡೆದರೂ ಅದನ್ನು ಹೊತ್ತುಕೊಂಡೇ ಸಾಗಬೇಕು. ರಿಕ್ಷಾ ಅವಲಂಭಿಸಿದರೆ ಪಡಿತರ ಅಕ್ಕಿಗಿಂತ ಹೆಚ್ಚಿನ ವೆಚ್ಚವನ್ನು ಬಾಡಿಗೆಗೆ ಭರಿಸಬೇಕಾಗುತ್ತದೆ. ರಸ್ತೆ ವಿಸ್ತರಣೆ, ದುರಸ್ತಿಗಾಗಿ ಹಲವು ವರ್ಷಗಳಿಂದ ಶಾಸಕರು, ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಲೇ ಬಂದಿದ್ದು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.
* ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಳೆದ 14 ವರ್ಷಗಳಿಂದ ಹೊಳೆದಾಟಿ ಶಾಲೆಗೆ ಕರೆದೊಯ್ಯಲಾಗುತ್ತಿದೆ. ಇಬ್ಬರು ಮಕ್ಕಳು ವಿಕಲಚೇತನರಾಗಿರುವುದರಿಂದ ಶಾಲೆಯಲ್ಲಿಯೇ ಕುಳಿತು ಶಾಲೆ ಮುಗಿದ ಮೇಲೆ ಮಕ್ಕಳನ್ನು ಕರೆದುಕೊಂಡು ಬರಲಾಗುತ್ತಿದೆ. ಮಕ್ಕಳ ಪಾಲನೆಯೇ ನಮಗೆ ದೊಡ್ಡ ಸವಾಲಾಗಿದ್ದು, ಕೂಲಿ ಕೆಲಸ ಮಾಡಿ ಬದುಕು ಸಾಗಿಸುವುದು ಕಷ್ಟವಾಗುತ್ತಿದೆ. ಇಬ್ಬರು ಮಕ್ಕಳು ಕಾಲಿನ ಸ್ವಾಧಿನ ಕಡೆದುಕೊಂಡಿರುವುದರಿಂದ ಎಲ್ಲದಕ್ಕೂ ಹೊತ್ತುಕೊಂಡೇ ತಿರುಗಾಟಬೇಕಿದೆ. ಹೊಳೆದಾಟುವುದಂತೂ ನರಕ ಯಾತನೆಯಾಗಿದೆ. – ಸುರೇಶ್ & ಸುಜಾತ, ವಿಕಲಚೇತನ ಮಕ್ಕಳ ಪಾಲಕರು
* ಹುಲ್ಕಡಿಕೆ ಭಾಗದಲ್ಲಿ ಬಹುತೇಕ ಮರಾಟಿ ಸಮುದಾಯದವರೇ ನೆಲೆಸಿದ್ದಾರೆ. ಮೂಲಭೂತ ಸೌಕರ್ಯ ಒದಗಿಸಲು ಹಲವು ವರ್ಷಗಳಿಂದ ಸರಕಾರಕ್ಕೆ ಬೇಡಿಕೆ ಇಡುತ್ತಲೇ ಬಂದಿದ್ದೇವೆ. ಈತನಕ ಜನಪ್ರತಿನಿಧಿಗಳು, ಜಿಲ್ಲಾಡಳಿತ ನಮ್ಮ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಈ ಸೇತುವೆ ನಿರ್ಮಾಣಕ್ಕೆ, ಜಿಲ್ಲಾಡಳಿತ ಪ್ರಾಕೃತಿಕ ವಿಕೋಪ ನಿಧಿಯಡಿ ಅನುದಾನ ಒದಗಿಸಲಿ. ರಸ್ತೆ ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಿಕೊಡಬೇಕು. – ಭೋಜ ನಾಯ್ಕ್ ಅಧ್ಯಕ್ಷರು ಬೈಂದೂರು ಮರಾಟಿ ಸಮಾಜ ಸೇವಾ ಸಂಘ
* ಕಾಡು ಪ್ರದೇಶದಲ್ಲಿ ಬದುಕುವುದು ದುಸ್ತರ. ಈ ನಡುವೆ ಹದಗೆಟ್ಟ ರಸ್ತೆಯಲ್ಲಿ ಸಂಚಾರಿಸುವುದೇ ನರಕಯಾತನೆಯಾಗಿದೆ. ತುರ್ತಾಗಿ ಯಾರನ್ನಾದರೂ ಸಂಪರ್ಕಿಸಬೇಕಿದ್ದರೇ ನೆಟ್ವರ್ಕ್ಗಾಗಿ ಗುಡ್ಡ ಪ್ರದೇಶಕ್ಕೆ ತೆರಳಬೇಕಾಗಿದೆ. – ಸವಿತಾ ಶ್ರೀನಿವಾಸ್, ಸ್ಥಳೀಯ ನಿವಾಸಿ
* ಹುಲ್ಕಡಿಕೆಯ ಸಮಸ್ಯೆಗೆ ಬಗ್ಗೆ ನನಗೆ ಅರಿವಿದೆ. ತಾತ್ಕಾಲಿಕವಾಗಿ ಏನೆಲ್ಲಾ ಪರಿಹಾರ ಒದಗಿಸಲು ಸಾಧ್ಯವೋ ಅದನ್ನು ತುರ್ತಾಗಿ ಮಾಡಲಾಗುವುದು. ಶಾಶ್ವತ ಕಾಲುಸಂಕ ನಿರ್ಮಿಸಲು ಯೋಜನೆ ರೂಪಿಸಲಾಗುವುದು. – ಗುರುರಾಜ ಗಂಟಿಹೊಳೆ, ಶಾಸಕರು