ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ’ಸಾಹಿತಿಕ ಕಥನದ ನಿರೂಪಣೆ ಮತ್ತು ಸಿನಿಮಾದ ನಿರೂಪಣೆಯು ವಿಭಿನ್ನ’ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಸಹಪ್ರಾಧ್ಯಾಪಕ ಸಾತ್ವಿಕ್ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಳ್ವಾಸ್ ಸಿನಿಮಾ ಸಮಾಜದ ಆಶ್ರಯದಲ್ಲಿ ನಡೆದ ‘ನಿರೂಪಣಾ ತಲ್ಲೀನತೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಿನಿಮಾಕ್ಕೆ ನಿರ್ದಿಷ್ಟ ಕತೆ ಮುಖ್ಯವಾಗುವುದಿಲ್ಲ. ಸಿನಿಮಾ ನಿರೂಪಣೆಯ ಕಥನ ಶೈಲಿಯೇ ಪ್ರಮುಖವಾಗುತ್ತದೆ. ಸಾಹಿತ್ಯಿಕ ಭಾಷೆ ಹಾಗೂ ಸಿನಿಮಾ ಭಾಷೆಗಳೆರಡೂ ವಿಭಿನ್ನ ಎಂದು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.
ಪ್ರತಿ ಸಿನಿಮಾವೂ ನೋಡುಗನ ದೃಷ್ಟಿಕೋನದಲ್ಲಿ ಬೇರೆ ಬೇರೆ ಅರ್ಥ ಕಲ್ಪಿಸಬಹುದು. ಆದರೆ, ಯಶಸ್ವಿ ನಿರ್ದೇಶಕನೊಬ್ಬ ತನ್ನ ಕಥಾ ಹಂದರವನ್ನು ಪರಿಣಾಮಕಾರಿಯಾಗಿ ನೋಡುಗರಿಗೆ ತಲುಪಿಸಿದಾಗ ಯಶಸ್ವಿ ಎನಿಸಿಕೊಳ್ಳುತ್ತಾನೆ ಎಂದರು.
ಸಾಮಾನ್ಯ ವೀಕ್ಷಣೆಯಿಂದ ಸಿನಿಮಾ ಸೂಕ್ಷ್ಮತೆಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾವನ್ನು ಇತರ ಮಾಧ್ಯಮಕ್ಕೆ ಬದಲಾಯಿಸಿದರೆ ಸ್ವಾರಸ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಿನಿಮಾಗಳು ವಿಭಿನ್ನ ವಿಚಾರಗಳ ಸಮೀಕರಣ ಎಂದರು.
ಸಿನಿಮಾ ಎಂದರೇನು? ಸಿನಿಮಾವನ್ನು ನೋಡುವುದು ಹೇಗೆ? ಸಿನಿಮಾದಲ್ಲಿನ ಪ್ರಮುಖ ಅಂಶಗಳ ಕುರಿತು ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ವಿಭಾಗದ ಸಹ ಪ್ರಾಧ್ಯಾಪಕ ಹರ್ಷವರ್ಧನ ಪಿ. ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಪ್ರಾಧ್ಯಾಪಕ ಡಾ| ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕರಾದ ದೀಕ್ಷಿತಾ, ಅಕ್ಷಯ್ ಕುಮಾರ್ ಹನ್ನಾ ಇದ್ದರು.
ವಿದ್ಯಾರ್ಥಿ ಅವಿನಾಶ್ ಕಟೀಲ್ ನಿರೂಪಿಸಿ, ವಂದಿಸಿದರು.